Ballari | ಚಾಲಕನ ನಿಯಂತ್ರಣ ತಪ್ಪಿ ಕಾಂಪ್ಲೆಕ್ಸ್ ಆವರಣಕ್ಕೆ ನುಗ್ಗಿದ ಬಸ್; ಎಂಟು ಬೈಕ್‌ಗಳು ಜಖಂ

ಬಳ್ಳಾರಿ: ಚಾಲಕನಿಗೆ ಹಠಾತ್ ತಲೆಸುತ್ತು ಕಾಣಿಸಿಕೊಂಡ ಪರಿಣಾಮ ನಿಯಂತ್ರಣ ತಪ್ಪಿದ ಬಸ್ಸೊಂದು ರಸ್ತೆ ಬದಿಯ ವಾಣಿಜ್ಯ ಸಂಕೀರ್ಣದ ಆವರಣಕ್ಕೆ ನುಗ್ಗಿದ ಘಟನೆ ನಗರದ ಸಿಟಿ ಬಸ್ ನಿಲ್ದಾಣದ ಬಳಿ ಮಂಗಳವಾರ ನಡೆದಿದೆ.
ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಎಂಟು ಬೈಕ್‌ಗಳು ಸಂಪೂರ್ಣ ಜಖಂಗೊಂಡಿವೆ. ವೇಗವಾಗಿ ಬಂದ ಬಸ್ ಸಾಲಾಗಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದು ನಿಂತಿದೆ. ಇದರಿಂದ ಬಸ್ ನೇರವಾಗಿ ಅಂಗಡಿಗಳ ಒಳಗೆ ನುಗ್ಗುವುದು ತಪ್ಪಿದೆ. ಸಂಭವಿಸಬಹುದಾಗಿದ್ದ ಭಾರಿ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.
ಅಸ್ವಸ್ಥಗೊಂಡ ಚಾಲಕನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಸಂಚಾರ ಪೊಲೀಸರು ಜಖಂಗೊಂಡ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆಯಿಂದಾಗಿ ಈ ಮಾರ್ಗದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ತಿಳಿದು ಬಂದಿದೆ.
Next Story




