Ballari | ಬೈಕ್‌ಗೆ ಕಾರು ಢಿಕ್ಕಿ : ಸವಾರನಿಗೆ ಗಂಭೀರ ಗಾಯ

ಸಂಡೂರು/ಬಳ್ಳಾರಿ : ಕಾರು ಢಿಕ್ಕಿಯಾಗಿ ಬೈಕ್ ಸವಾರನೊರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸಂಡೂರು ಸಮೀಪದ ರೆಸಾರ್ಟ್ ಬಳಿ ಬುಧವಾರ ನಡೆದಿದೆ.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಅಮೀನುದ್ದೀನ್ (40) ಅವರು ಪ್ರತಿದಿನದಂತೆ ಸಂಡೂರಿನಿಂದ ಜಿಂದಾಲ್ ಕಾರ್ಖಾನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ರೆಸಾರ್ಟ್ ಸಮೀಪ ಅತಿವೇಗದಿಣದ ಬಂದ ಆಲ್ಟೊ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಢಿಕ್ಕಿಯ ರಭಸಕ್ಕೆ ಅಮೀನುದ್ದೀನ್ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ನುಗ್ಗಿದೆ ಎಂದು ತಿಳಿದುಬಂದಿದೆ.
ಸ್ಥಳೀಯರು ಹಾಗೂ ಸಾರ್ವಜನಿಕರು ಕೂಡಲೇ ಗಾಯಾಳುವಿಗೆ ನೆರವಾಗಿ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ವಿಮ್ಸ್) ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕಾರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




