Ballari | ಬಕ್ರೀದ್ ಹಬ್ಬವನ್ನು ಶಾಂತಿ-ಸೌಹಾರ್ದದಿಂದ ಆಚರಿಸಿ : ಡಿವೈಎಸ್ಪಿ ಪ್ರಸಾದ್ ಗೋಖಲೆ

ಬಳ್ಳಾರಿ / ಕಂಪ್ಲಿ : ಮೇ 28ರಂದು ನಡೆಯಲಿರುವ ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಡಿವೈಎಸ್ಪಿ ಪ್ರಸಾದ್ ಕೆ.ಗೋಖಲೆ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಬಕ್ರೀದ್ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಾರ್ಥನೆಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿಯೇ ಸಲ್ಲಿಸಬೇಕು. ಹಿಂದು-ಮುಸ್ಲಿಮರು ಒಗ್ಗಟ್ಟಿನಿಂದ ಹಬ್ಬ ಆಚರಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪೊಲೀಸ್ ಇಲಾಖೆ ಸದಾ ಎಚ್ಚರಿಕೆಯಿಂದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು. ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಿಐ ಕೆ.ಬಿ. ವಾಸುಕುಮಾರ್ ಮಾತನಾಡಿ, ಕಂಪ್ಲಿ ಪಟ್ಟಣ ಶಾಂತಿ-ಸೌಹಾರ್ದತೆಗೆ ಹೆಸರಾಗಿದೆ. ಸಾರ್ವಜನಿಕರು ಸಂಭ್ರಮದಿಂದ ಹಬ್ಬ ಆಚರಿಸುವ ಜೊತೆಗೆ ಕಾನೂನಿಗೆ ಗೌರವ ನೀಡಿ ಸಹಕರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕೆ.ಎಂ. ಹೇಮಯ್ಯಸ್ವಾಮಿ, ಎನ್. ಹಬೀಬಿ ರೆಹಮಾನ್, ಕೆ. ಮೆಹಬೂಬ್ ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಎಸ್ಐ ಬಸವರಾಜ್, ವಿವಿಧ ಸಂಘ-ಸಂಸ್ಥೆಗಳ ಮುಖಂಡರಾದ ಎಂ. ಉಸ್ಮಾನ್, ಎಂ. ಬಾಬು, ಅಸ್ಲಾಂ, ಮೌಲಾಹುಸೇನ್, ನವಾಬಸಾಬ್, ಬಿ. ಜಾಫರ್ ಸಾಧಿಕ್, ಕಡಪ ಮಸ್ತನವಲಿ, ಅತ್ತಾವುಲ್ಲಾ, ಜಹೀರುದ್ದೀನ್, ವಾಹಿದ್, ಸಿದ್ದನಗೌಡ, ದೇವಣ್ಣ, ಕನಕಪ್ಪ, ಹನುಮಂತಪ್ಪ, ದೊಡ್ಡಬಸಪ್ಪ, ರಮೇಶ್, ನಾಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.






