Ballari | ನಿಡುಗುರ್ತಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಸತ್ ಚುನಾವಣೆ

ಸಂಡೂರು/ಬಳ್ಳಾರಿ: ಪ್ರಜಾಪ್ರಭುತ್ವದ ಮೌಲ್ಯಗಳು, ಜವಾಬ್ದಾರಿಯುತ ಮತದಾನದ ಮಹತ್ವ ಹಾಗೂ ಸಂವಿಧಾನದ ಆಶಯಗಳನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸುವ ಉದ್ದೇಶದಿಂದ ಸಂಡೂರು ತಾಲೂಕಿನ ನಿಡುಗುರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಸತ್ತಿನ ಅಣಕು ಚುನಾವಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು.
ಅಧಿಸೂಚನೆ ಪ್ರಕಟಣೆ, ನಾಮಪತ್ರ ಸಲ್ಲಿಕೆ, ಪ್ರಚಾರ, ಪ್ರಣಾಳಿಕೆ ಮಂಡನೆ, ಮತದಾನ, ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆವರೆಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ನೈಜ ಚುನಾವಣೆಯ ಮಾದರಿಯಲ್ಲೇ ನಡೆಸಲಾಯಿತು. ಇದರಿಂದ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮದಿಂದ ಅನುಭವಿಸಿದರು.
ಚುನಾವಣೆಗೆ ಮುನ್ನ ಶಿಕ್ಷಕರು ಭಾರತದ ಸಂವಿಧಾನದ ಮೂಲ ಆಶಯಗಳು, ಮತದಾನದ ಹಕ್ಕಿನ ಮಹತ್ವ, ಜನಪ್ರತಿನಿಧಿಗಳ ಜವಾಬ್ದಾರಿ, ನಾಗರಿಕರ ಪಾತ್ರ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸ್ಪರ್ಧಿಸಿದ್ದ ಅಭ್ಯರ್ಥಿಗಳು ಶಾಲೆಯ ಅಭಿವೃದ್ಧಿ, ಸ್ವಚ್ಛತೆ, ಶಿಸ್ತು, ಪರಿಸರ ಸಂರಕ್ಷಣೆ, ಕ್ರೀಡೆ ಹಾಗೂ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಸಂಬಂಧಿಸಿದ ಭರವಸೆಗಳೊಂದಿಗೆ ಮತಯಾಚನೆ ನಡೆಸಿದರು. ಬಳಿಕ ಮತದಾರರ ಗುರುತಿನ ಪರಿಶೀಲನೆ, ಮತದಾರರ ಪಟ್ಟಿ ದೃಢೀಕರಣ, ಗೌಪ್ಯ ಮತದಾನ ಹಾಗೂ ಮತ ಎಣಿಕೆ ಪ್ರಕ್ರಿಯೆಯನ್ನು ನಿಯಮಾನುಸಾರ ನಡೆಸಿ ಫಲಿತಾಂಶ ಪ್ರಕಟಿಸಲಾಯಿತು.
ವಿಜೇತ ಅಭ್ಯರ್ಥಿಗಳನ್ನು ವಿದ್ಯಾರ್ಥಿಗಳು ಅಭಿನಂದಿಸಿದರೆ, ಸೋತ ಅಭ್ಯರ್ಥಿಗಳು ಕ್ರೀಡಾಸ್ಫೂರ್ತಿಯಿಂದ ಫಲಿತಾಂಶವನ್ನು ಸ್ವೀಕರಿಸಿದರು. ಚುನಾವಣೆಯ ನಂತರ ಶಾಲಾ ಆವರಣದಲ್ಲಿ ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮ ಮನೆಮಾಡಿತ್ತು.
ಶಾಲೆಯ ಮುಖ್ಯ ಶಿಕ್ಷಕರಾದ ಎ. ಯರ್ರಿಸ್ವಾಮಿ ಮತಗಟ್ಟೆ ಮುಖ್ಯಾಧಿಕಾರಿಯಾಗಿ (PRO) ಕಾರ್ಯನಿರ್ವಹಿಸಿದರು. ಸಹ ಶಿಕ್ಷಕರಾದ ಶಶಿಧರ ಬಿ.ಎಂ. (APRO), ಶ್ರೀಮತಿ ಶ್ವೇತಾ ವಿ.ಕೆ. (PO-1), ಕಿರಣಕುಮಾರ್ (PO-2), ದೊಡ್ಡ ಬಸವರಾಜ್ (BLO), ಸ್ವಾಮಿ ಜಿ. (ಮತಗಟ್ಟೆ ಅಧಿಕಾರಿ) ಹಾಗೂ ಮಲ್ಲಿಕಾರ್ಜುನ (ವೀಕ್ಷಣಾಧಿಕಾರಿ) ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಅಣಕು ಚುನಾವಣೆಯ ಮೂಲಕ ವಿದ್ಯಾರ್ಥಿಗಳಿಗೆ ಸಂವಿಧಾನ, ಪ್ರಜಾಪ್ರಭುತ್ವ, ಚುನಾವಣಾ ವ್ಯವಸ್ಥೆ, ಜವಾಬ್ದಾರಿಯುತ ಮತದಾನದ ಮಹತ್ವ ಹಾಗೂ ನಾಯಕತ್ವದ ಗುಣಗಳ ಕುರಿತು ಪ್ರಾಯೋಗಿಕ ಅರಿವು ಮೂಡಿತು.






