Ballari | ನಾಲ್ಕು ಕಾರ್ಮಿಕ ಸಂಹಿತೆ ರದ್ದು, ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ

ಸಂಡೂರು/ಬಳ್ಳಾರಿ: ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು, ಕನಿಷ್ಠ ವೇತನವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು, ಗುತ್ತಿಗೆ ಹಾಗೂ ಸ್ಕೀಂ ಕಾರ್ಮಿಕರನ್ನು ಕಾಯಂಗೊಳಿಸಬೇಕು ಮತ್ತು ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ರಾಜ್ಯ ಸಮಿತಿಯ ಕರೆಯ ಮೇರೆಗೆ ಸೋಮವಾರ ಸಂಡೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ಜಿಲ್ಲಾ ಸಮಿತಿ ಹಾಗೂ ಸಂಯೋಜಿತ ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘ, ಗ್ರಾಮ ಪಂಚಾಯಿತಿ ನೌಕರರ ಸಂಘ, ಅಂಗನವಾಡಿ ನೌಕರರ ತಾಲೂಕು ಘಟಕ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶಾಸಕರ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು. ಶಾಸಕರ ಅನುಪಸ್ಥಿತಿಯಲ್ಲಿ ಪ್ರತಿಭಟನಾಕಾರರು ಸಂಸದರಿಗೆ ಉದ್ದೇಶಿಸಿದ ಮನವಿಯನ್ನು ಸಲ್ಲಿಸಿದರು.
ಸಿಐಟಿಯು ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ ಎಂ. ತಿಪ್ಪೇಸ್ವಾಮಿ ಪ್ರತಿಭಟನೆಗೆ ನೇತೃತ್ವ ವಹಿಸಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳಿಗೆ ಧಕ್ಕೆ ತರುವಂತಿವೆ. ಅವುಗಳನ್ನು ತಕ್ಷಣ ಹಿಂಪಡೆದು ಕಾರ್ಮಿಕರಿಗೆ ನ್ಯಾಯಸಮ್ಮತ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಕನಿಷ್ಠ ವೇತನವನ್ನು ಪರಿಷ್ಕರಿಸಿ ಸಮರ್ಪಕವಾಗಿ ಜಾರಿಗೊಳಿಸಬೇಕು, ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಸ್ಕೀಂ ಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ಪರಿಗಣಿಸಿ ಕನಿಷ್ಠ ವೇತನ ನೀಡಬೇಕು, ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಕಾರ್ಮಿಕರಿಗೆ ಇಎಸ್‌ಐ, ಪಿಎಫ್, ಗ್ರಾಚ್ಯುಟಿ ಹಾಗೂ ಬೋನಸ್ ಸೌಲಭ್ಯಗಳನ್ನು ಪಡೆಯಲು ಇರುವ ವೇತನ ಮಿತಿಯನ್ನು ರದ್ದುಪಡಿಸಿ ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ತಾಲೂಕು ಘಟಕದ ಮುಖಂಡ ಖಾಜಾ ಬನ್ನಿ, ಗ್ರಾಮ ಪಂಚಾಯಿತಿ ನೌಕರರ ಸಂಘದ ಕೃಷ್ಣನಾಯ್ಕ್, ಸೋಮು ನಾಯಕ್, ನಾಗೇಂದ್ರಪ್ಪ, ಜೆಕೆ ಕುಮಾರಸ್ವಾಮಿ, ಹುಲುಗಪ್ಪ, ಓಂಕಾರಪ್ಪ, ಮಲಿಯಪ್ಪ ಹಾಗೂ ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾದ ಜಗದೀಶ್, ಸಿದ್ದಪ್ಪ, ನಾಗೇಂದ್ರ, ಪಾಂಡು, ಅಯ್ಯಪ್ಪ, ಶಿವಶಂಕರ್, ಬಸವರಾಜ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಹಿಳಾ ಕಾರ್ಮಿಕ ಮುಖಂಡರಾದ ರುದ್ರಮ್ಮ, ಭಾಗ್ಯಮ್ಮ, ಪಾರ್ವತಮ್ಮ, ಜಡೆಮ್ಮ, ಚಂದ್ರಮ್ಮ, ಸಣ್ಣ ರುದ್ರಮ್ಮ, ಮಾದೇವಿ ಹಾಗೂ ಹೋರಾಟಗಾರರಾದ ಎ. ಸ್ವಾಮಿ (ತೋರಣಗಲ್ಲು), ಕೊಂಡಾಪುರದ ದುರ್ಗಮ್ಮ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆ ಬಳಿಕ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರ ಹಾಗೂ ಸಂಸದರ ಕಚೇರಿಗೆ ಮನವಿ ಸಲ್ಲಿಸಲಾಯಿತು.






