ಬಳ್ಳಾರಿ | ರೆಡ್ಡಿ ಬಣಗಳ ನಡುವೆ ಘರ್ಷಣೆ : ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ

ಬಳ್ಳಾರಿ, ಜ.1: ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ರೆಡ್ಡಿ ಬಣಗಳ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಗುಂಡು ತಗುಲಿ ಮೃತಪಟ್ಟ ಘಟನೆ ಬಳ್ಳಾರಿ ನಗರದ ಹವಂಬಾವಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮೃತಪಟ್ಟ ವ್ಯಕ್ತಿಯನ್ನು ಬಳ್ಳಾರಿಯ ಹುಸೇನ್ ನಗರದ ನಿವಾಸಿ, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ (28) ಎಂದು ಗುರುತಿಸಲಾಗಿದೆ.
ಮಾಜಿ ಸಚಿವ ಜನಾರ್ಧನ ರೆಡ್ಡಿ ಬೆಂಬಲಿಗರು ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್‌ಮ್ಯಾನ್ ಫೈರಿಂಗ್ ಮಾಡಿದ್ದಾರೆ ಎಂದು ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ.
ಜ.3ರಂದು ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಭರತ್ ರೆಡ್ಡಿ ಬೆಂಬಲಿಗರು ಜನಾರ್ಧನ ರೆಡ್ಡಿ ಅವರ ಮನೆಯ ಮುಂಭಾಗ ಬ್ಯಾನರ್ ಅಳವಡಿಸಲು ಮುಂದಾಗಿದ್ದರು. ಇದಕ್ಕೆ ಜನಾರ್ಧನ ರೆಡ್ಡಿ ಅಭಿಮಾನಿಗಳು ಮತ್ತು ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬ್ಯಾನರ್ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಎರಡು ತಂಡಗಳ ನಡುವೆ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅವಂಬಾವಿ ಏರಿಯಾದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ವಹಿಸಲಾಗಿದೆ.
ಹತ್ಯಾ ಯತ್ನ: ಜನಾರ್ದನ ರೆಡ್ಡಿ ಆರೋಪ
ದಬ್ಬಾಳಿಕೆಯಿಂದ ಬ್ಯಾನರ್ ಹಾಕಲು ರೌಡಿಗಳನ್ನು ಕರೆದುಕೊಂಡು ಬಂದಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ ಶ್ರೀರಾಮುಲು ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಬ್ಯಾನರ್ ವಿಚಾರ ಇಟ್ಟುಕೊಂಡು ನನ್ನ ಮೇಲೆ ಹತ್ಯಾ ಯತ್ನ ನಡೆದಿದೆ. ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್‌ಮ್ಯಾನ್ ಫೈರಿಂಗ್ ಮಾಡಲು ಬಂದಿದ್ದಾರೆ ಎಂದು ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಗೆ ಕಾರಣಕರ್ತರಾದ ಜನಾರ್ಧನ ರೆಡ್ಡಿ ಬಂಧನವಾಗುವವರೆಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಶಾಸಕ ಭರತ್ ರೆಡ್ಡಿ ಎಚ್ಚರಿಸಿದ್ದಾರೆ.







