Ballari | ಧರ್ಮಾಪುರದ ಪುರಾತನ ಕಲ್ಯಾಣಿಯಲ್ಲಿ ಸ್ವಚ್ಛತಾ, ಸೌಂದರ್ಯೀಕರಣ ಅಭಿಯಾನ

ಸಂಡೂರು/ಬಳ್ಳಾರಿ: ಸ್ವಚ್ಛತಾ ಹಿ ಸೇವಾ–2026 ಅಭಿಯಾನದ ಅಂಗವಾಗಿ ವಿಶ್ವ ಪ್ರವಾಸೋದ್ಯಮ ದಿನವನ್ನು ಸಂಡೂರು ಪುರಸಭೆ ವತಿಯಿಂದ ತಾಲೂಕಿನ ಐತಿಹಾಸಿಕ ಧರ್ಮಾಪುರದ ಪುರಾತನ ಮೆಟ್ಟಿಲು ಬಾವಿ (ಕಲ್ಯಾಣಿ)ಯಲ್ಲಿ ಸ್ವಚ್ಛತಾ ಹಾಗೂ ಸೌಂದರ್ಯೀಕರಣ ಅಭಿಯಾನದ ಮೂಲಕ ಆಚರಿಸಲಾಯಿತು.
ಹಲವು ತಲೆಮಾರುಗಳಿಂದ ಸ್ಥಳೀಯ ನಿವಾಸಿಗಳ ಬಳಕೆಯಲ್ಲಿರುವ ಹಾಗೂ ಇಂದಿಗೂ ಸಾರ್ವಜನಿಕರಿಗೆ ಉಪಯುಕ್ತವಾಗಿರುವ ಧರ್ಮಾಪುರದ ಪುರಾತನ ಕಲ್ಯಾಣಿಯನ್ನು ಸಾರ್ವಜನಿಕರು ಹಾಗೂ ಪುರಸಭೆಯ ಸಮುದಾಯ ಸಂಚಾಲಕರ ಸಕ್ರಿಯ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸಲಾಯಿತು.
ಕಲ್ಯಾಣಿಯ ಸುತ್ತಮುತ್ತ ಬೆಳೆದಿದ್ದ ಕಳೆ, ಅನಗತ್ಯ ಸಸ್ಯವರ್ಗ ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿ, ಸುತ್ತಲಿನ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸಲಾಯಿತು. ಬಳಿಕ ಅಗತ್ಯ ಸ್ಥಳಗಳಲ್ಲಿ ಬಣ್ಣ ಬಳಿದು ಕಲ್ಯಾಣಿಯ ಸೌಂದರ್ಯವನ್ನು ಹೆಚ್ಚಿಸಲಾಯಿತು.
ಸ್ಥಳೀಯ ಪಾರಂಪರಿಕ ತಾಣಗಳು, ಸಾಂಪ್ರದಾಯಿಕ ಜಲಮೂಲಗಳು, ಪರಿಸರ ಹಾಗೂ ಸ್ವಚ್ಛತೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವ ಮಹತ್ವವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು. ಕಲ್ಯಾಣಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳುವಂತೆ ಮತ್ತು ಪ್ಲಾಸ್ಟಿಕ್ ಸೇರಿದಂತೆ ಯಾವುದೇ ರೀತಿಯ ತ್ಯಾಜ್ಯವನ್ನು ಎಸೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಾದ ಮಂಜು, ವೀರೇಶ್ ಹಾಗೂ ಮನು, ಪುರಸಭೆಯ ನೈರ್ಮಲ್ಯ ಮೇಲ್ವಿಚಾರಕರಾದ ಶಾಂತಾ, ವಿಜಯ್ ಹಾಗೂ ಕಿರಣ್, ಸಮುದಾಯ ಸಂಚಾಲಕರಾದ ಕಾವ್ಯಾಂಜಲಿ, ಚೈತ್ರಾ, ಮಾರೆಕ್ಕ, ದೀನಾ ಹಾಗೂ ಅನಿತಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.






