Ballari | ಸ್ವಚ್ಛತೆ ಪುರಸಭೆಗೆ ಮಾತ್ರ ಸೀಮಿತವಲ್ಲ; ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ: ಬಿ.ಮಲ್ಲಿಕಾರ್ಜುನ

ಬಳ್ಳಾರಿ/ಕಂಪ್ಲಿ: ಸ್ವಚ್ಛತೆ ಎನ್ನುವುದು ಕೇವಲ ಪುರಸಭೆಗೆ ಸೀಮಿತವಾದ ಕೆಲಸವಲ್ಲ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬ ನಾಗರಿಕರು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದಾಗ ಮಾತ್ರ ಆರೋಗ್ಯವಂತ ಹಾಗೂ ಸುಂದರ ಸಮಾಜ ನಿರ್ಮಿಸಲು ಸಾಧ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಆಯೋಜಿಸಿದ್ದ ‘ಒಂದು ದಿನ ಒಂದು ಗಂಟೆ ಎಲ್ಲರೂ ಒಂದಾಗಿ–ಸ್ವಚ್ಛತೆಯೇ ಸೇವೆ 2026’ ಅಭಿಯಾನದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಚ್ಛತಾ ಕಾರ್ಯಕ್ರಮಗಳು ಕೇವಲ ನಿರ್ದಿಷ್ಟ ಅವಧಿಗೆ ಮಾತ್ರ ಸೀಮಿತವಾಗಬಾರದು. ಅವು ನಿರಂತರ ಅಭಿಯಾನವಾಗಿ ಮುಂದುವರಿದಾಗ ಮಾತ್ರ ಸ್ವಚ್ಛ ನಗರವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಮನುಷ್ಯನ ಆರೋಗ್ಯವೂ ಉತ್ತಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹೆಚ್ಚಿನ ಒತ್ತು ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅಭಿಯಾನದ ಅಂಗವಾಗಿ ಪಟ್ಟಣದ ಪ್ರಮುಖ ವೃತ್ತವಾದ ಅಂಬೇಡ್ಕರ್ ವೃತ್ತ ಹಾಗೂ ಸುತ್ತಲಿನ ಪ್ರಮುಖ ರಸ್ತೆಗಳಲ್ಲಿ ಪುರಸಭೆ ಸಿಬ್ಬಂದಿ ಮತ್ತು ಸಾರ್ವಜನಿಕರು ಒಗ್ಗೂಡಿ ಸ್ವಚ್ಛತಾ ಕಾರ್ಯ ಕೈಗೊಂಡರು.
ಈ ಸಂದರ್ಭದಲ್ಲಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶಬಾಬು, ಸಿಬ್ಬಂದಿಗಳಾದ ರಮೇಶ್ ಬೆಳಂಕರ್, ಸುಧಾಕರ, ಗೌಸ್ ಸೇರಿದಂತೆ ಪುರಸಭೆಯ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.






