Ballari | ಭವಿಷ್ಯ ರೂಪಿಸಿಕೊಳ್ಳಲು ನಿರಂತರ ಪ್ರಯತ್ನ ಅಗತ್ಯ : ಡಾ.ದ್ಯಾಮಪ್ಪ ಕಿನ್ನಾಳ
ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಸಂಡೂರು/ಬಳ್ಳಾರಿ: ವಿದ್ಯಾರ್ಥಿ ಜೀವನವು ಭವಿಷ್ಯವನ್ನು ರೂಪಿಸಿಕೊಳ್ಳುವ ಮಹತ್ವದ ಹಂತವಾಗಿದ್ದು, ನಿರಂತರ ಪ್ರಯತ್ನ, ಜ್ಞಾನಾರ್ಜನೆ ಹಾಗೂ ಉತ್ತಮ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಸಂಡೂರಿನ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ದ್ಯಾಮಪ್ಪ ಕಿನ್ನಾಳ ಹೇಳಿದರು.
ಬಂಡ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸ ನೀಡಿದ ಅವರು, ಪ್ರಯತ್ನವಿಲ್ಲದೆ ಪ್ರತಿಫಲ ಸಿಗುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೆ ತಾವೇ ಶಿಲ್ಪಿಗಳಾಗಬೇಕು ಎಂದು ಕಿವಿಮಾತು ಹೇಳಿದರು.
ಥಾಮಸ್ ಆಲ್ವಾ ಎಡಿಸನ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸೇರಿದಂತೆ ಅನೇಕ ಮಹನೀಯರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಅಲ್ಪತೃಪ್ತಿಗೆ ಒಳಗಾಗದೆ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಚೋರನೂರಿನ ಪ್ರಾಚಾರ್ಯ ಬಸವರಾಜ್ ಮಾತನಾಡಿ, ಮಾನವ ಜನ್ಮ ಅತ್ಯಂತ ಅಮೂಲ್ಯವಾಗಿದ್ದು, ಅದನ್ನು ಸಾರ್ಥಕಪಡಿಸಿಕೊಳ್ಳಲು ವಿದ್ಯಾರ್ಥಿಗಳು ಜ್ಞಾನ ಸಂಪಾದಿಸಬೇಕು. ಜ್ಞಾನದ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಸ್ಥಳೀಯರಾದ ನಾಗರಾಜ್ ಕಂಚಳ್ಳಿ ಮಾತನಾಡಿ, ಬಂಡ್ರಿ ಭಾಗದ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ತಮ್ಮ ಬೇರುಗಳನ್ನು ಅರಿತುಕೊಂಡು ಭವಿಷ್ಯದತ್ತ ಆತ್ಮವಿಶ್ವಾಸದಿಂದ ಸಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಡ್ರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜೆ. ವೆಂಕಟೇಶ್ ವಹಿಸಿದ್ದರು. ವೇದಿಕೆಯಲ್ಲಿ ಸಿದ್ದೇಶ್, ಪ್ರಕಾಶ್ ಕೆ.ಬಿ., ನಾಗರಾಜ್ ಕಂಚಳ್ಳಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರಾದ ಕರಿಬಸಪ್ಪ ಬಿ., ಡಾ. ವೈ. ಪಕೀರಪ್ಪ, ರಾಜೇಶ್ ಸಿ.ಪಿ., ಪ್ರಿಯಾಂಕ, ಶ್ರುತಿ, ರಮೇಶ್ ಬಿ. ಸೇರಿದಂತೆ ಸಿಬ್ಬಂದಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.






