Ballari | ಕೊಟ್ಟೂರು ಠಾಣೆಗೆ ಮೊದಲ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಡಿ.ದುರುಗಪ್ಪ ಅಧಿಕಾರ ಸ್ವೀಕಾರ

ಕೊಟ್ಟೂರು: ಇತ್ತೀಚೆಗಷ್ಟೇ ಮೇಲ್ದರ್ಜೆಗೇರಿದ ಕೊಟ್ಟೂರು ಪೊಲೀಸ್ ಠಾಣೆಯ ಪ್ರಥಮ ಸರ್ಕಲ್ ಇನ್ಸ್‌ಪೆಕ್ಟರ್ (PI) ಆಗಿ ಡಿ. ದುರುಗಪ್ಪ ಅವರು ಮಂಗಳವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಸಾರ್ವಜನಿಕರ ದೀರ್ಘಕಾಲದ ಬೇಡಿಕೆಯ ಹಿನ್ನೆಲೆಯಲ್ಲಿ ಸರ್ಕಾರ ಕೊಟ್ಟೂರು ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ ಆದೇಶಿಸಿತ್ತು. ಠಾಣೆ ಮೇಲ್ದರ್ಜೆಗೇರಿದ ಬಳಿಕ ಡಿ. ದುರುಗಪ್ಪ ಅವರು ಪ್ರಥಮ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಹೊಸ ವ್ಯವಸ್ಥೆಯಡಿ ಹೊಸಹಳ್ಳಿ ಪೊಲೀಸ್ ಠಾಣೆಯನ್ನು ಕೊಟ್ಟೂರು ವೃತ್ತದಿಂದ ಬೇರ್ಪಡಿಸಿ ಕೂಡ್ಲಿಗಿ ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಠಾಣೆ ಮೇಲ್ದರ್ಜೆಗೇರಿದ ಬೆನ್ನಲ್ಲೇ ಪ್ರಥಮ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಡಿ. ದುರುಗಪ್ಪ ಅವರ ನೇಮಕ ಸಾರ್ವಜನಿಕರಲ್ಲಿ ನಿರೀಕ್ಷೆ ಮೂಡಿಸಿದೆ.
ಕೊಟ್ಟೂರು ಪೊಲೀಸ್ ಠಾಣೆಯ ಇತಿಹಾಸದಲ್ಲಿ ಪ್ರಥಮ ಮಹಿಳಾ ಪಿಎಸ್‌ಐ ಆಗಿ ಸೇವೆ ಸಲ್ಲಿಸಿದ ಗೀತಾಂಜಲಿ ಶಿಂದೆ ಅವರು, ಠಾಣೆ ಮೇಲ್ದರ್ಜೆಗೇರುವ ಮುನ್ನ ಕಾರ್ಯನಿರ್ವಹಿಸಿದ ಕೊನೆಯ ಪಿಎಸ್‌ಐ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಪಿಐ ಡಿ. ದುರುಗಪ್ಪ, ತಮ್ಮ 23 ವರ್ಷಗಳ ಪೊಲೀಸ್ ಸೇವೆಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಆದ್ಯತೆ ನೀಡಿರುವುದಾಗಿ ತಿಳಿಸಿದರು.
ಕೊಟ್ಟೂರು ತಾಲೂಕಿನಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಕಾನೂನು ಸುವ್ಯವಸ್ಥೆ ಬಿಗಿಗೊಳಿಸುವುದು, ಅಪರಾಧ ತಡೆಗೆ ಆದ್ಯತೆ ನೀಡುವುದು ಹಾಗೂ ಪಾರದರ್ಶಕ ಮತ್ತು ಜನಸ್ನೇಹಿ ಆಡಳಿತ ನೀಡಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿಗಳಾದ ಚಂದ್ರಶೇಖರ ಗೌಡ, ಗುರು ರಾಂಪುರ, ಸಂತೋಷ್, ನಾಗಭೂಷಣ್ ಸೇರಿದಂತೆ ಹಲವು ಸಿಬ್ಬಂದಿ ಹಾಗೂ ಸ್ಥಳೀಯ ಮುಖಂಡರು ನೂತನ ಇನ್ಸ್‌ಪೆಕ್ಟರ್ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿ ಶುಭ ಹಾರೈಸಿದರು.






