ಬಳ್ಳಾರಿ | ಕಂಪ್ಲಿ–ಗಂಗಾವತಿ ರಸ್ತೆಯ ಅಪಾಯಕಾರಿ ಸೇತುವೆ ಪುನರ್ ನಿರ್ಮಾಣ

ಬಳ್ಳಾರಿ / ಕಂಪ್ಲಿ : ಪಟ್ಟಣದ ಹೊರವಲಯದ ಕಂಪ್ಲಿ–ಗಂಗಾವತಿ ರಾಜ್ಯ ಹೆದ್ದಾರಿ–29 ರ ಕೋಟೆ ಹತ್ತಿರದ ದರ್ಗಾ ತಿರುವು ರಸ್ತೆಯಲ್ಲಿರುವ ಸಿದ್ದಿವಿನಾಯಕ ದೇವಸ್ಥಾನದ ಸಮೀಪ ವಿಜಯನಗರ ಉಪ ಕಾಲುವೆ ಮೇಲೆ ನಿರ್ಮಿಸಲಾದ ಸೇತುವೆ ದುರಸ್ತಿಯಿಲ್ಲದೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಹಿನ್ನೆಲೆಯಲ್ಲಿ, ಇದೀಗ ಲೋಕೋಪಯೋಗಿ ಇಲಾಖೆ (PWD) ಸೇತುವೆಯ ಪುನರ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದೆ.
ಸೇತುವೆಯ ಎರಡೂ ಬದಿಗಳ ರಕ್ಷಣಾ ಗೋಡೆಗಳು ಕುಸಿದು ಬಿದ್ದಿದ್ದರೆ, ಮತ್ತೊಂದೆಡೆ ರಸ್ತೆಯಲ್ಲಿ ದೊಡ್ಡ ಗುಂಡಿ ಉಂಟಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಪರಿಣಾಮವಾಗಿ ಹಲವು ಬಾರಿ ಅಪಘಾತಗಳು ಸಂಭವಿಸಿದ್ದವು. ಈ ಸಮಸ್ಯೆಯ ಕುರಿತು ಮಾಧ್ಯಮಗಳಲ್ಲಿ ಹಲವು ಬಾರಿ ಸಚಿತ್ರ ವರದಿಗಳು ಪ್ರಕಟವಾಗಿದ್ದವು.
ಈ ಸೇತುವೆ ರಾಜ್ಯ ಹೆದ್ದಾರಿ ವ್ಯಾಪ್ತಿಗೆ ಒಳಪಟ್ಟಿದ್ದರೂ, ಅದರ ಕೆಳಗೆ ಹರಿಯುವ ಉಪ ಕಾಲುವೆ ಜಲಸಂಪನ್ಮೂಲ ಇಲಾಖೆಗೆ ಸೇರಿದ್ದಾಗಿದ್ದು, ದುರಸ್ತಿ ಹೊಣೆಗಾರಿಕೆ ಯಾರದ್ದು ಎಂಬ ಗೊಂದಲವೂ ಉಂಟಾಗಿತ್ತು. ಆದರೆ, ಇತ್ತೀಚೆಗೆ ಕಂಪ್ಲಿ ಕೋಟೆಯಿಂದ ತುಂಗಭದ್ರಾ ನದಿವರೆಗೆ 2 ಕಿ.ಮೀ. ರಸ್ತೆ ಆಧುನೀಕರಣ, ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು, ಇದೇ ಯೋಜನೆಯ ಭಾಗವಾಗಿ ಸೇತುವೆಯ ಪುನರ್ ನಿರ್ಮಾಣವೂ ಆರಂಭಗೊಂಡಿದೆ.
ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಣ್ಣಿನ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಆದರೆ ಮಣ್ಣಿನ ರಸ್ತೆಯಲ್ಲಿ ಸಂಚಾರದಿಂದ ಧೂಳಿನ ಸಮಸ್ಯೆ ಉಂಟಾಗಿ ಪಕ್ಕದ ಹೊಲಗಳ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಪ್ರತಿದಿನ ನೀರು ಸಿಂಪಡಿಸುವಂತೆ ಸ್ಥಳೀಯ ರೈತರು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇ) ಆನಂದ ಪಮ್ಮಾರ್, ಸೇತುವೆ ಕಿರಿದಾಗಿದ್ದು, ರಕ್ಷಣಾ ಗೋಡೆಗಳು ಕುಸಿದು ರಸ್ತೆ ಗುಂಡಿ ಬಿದ್ದ ಕಾರಣ ಅಪಘಾತಗಳು ಸಂಭವಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ 2 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಯೊಂದಿಗೆ ಸೇತುವೆಯನ್ನು ಸಂಪೂರ್ಣವಾಗಿ ಪುನರ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.







