Ballari | ದಸರಾ ಸಿಎಂ ಕಪ್ ಕುಸ್ತಿ ಪಂದ್ಯಾವಳಿ: ಕಂಪ್ಲಿಯ ತೇಜಶ್ವನಿಗೆ ಬೆಳ್ಳಿ ಪದಕ

ಬಳ್ಳಾರಿ/ಕಂಪ್ಲಿ: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ‘ಸಿಎಂ ಕಪ್’ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಕಂಪ್ಲಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿಂಗಿ ತೇಜಶ್ವನಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಈ ಮೂಲಕ ತಾಲೂಕು ಹಾಗೂ ಜಿಲ್ಲೆಗೆ ಕ್ರೀಡಾ ಕೀರ್ತಿ ತಂದಿದ್ದಾರೆ.
ಮೈಸೂರಿನಲ್ಲಿ ಪ್ರತಿವರ್ಷ ದಸರಾ ಹಬ್ಬದ ಸಾಂಸ್ಕೃತಿಕ ವೈಭವದೊಂದಿಗೆ ಆಯೋಜಿಸಲಾಗುವ ಈ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ನುರಿತ ಮಹಿಳಾ ಮತ್ತು ಪುರುಷ ಕುಸ್ತಿಪಟುಗಳು ಭಾಗವಹಿಸಿದ್ದರು. ಅತ್ಯಂತ ಕಠಿಣ ಪೈಪೋಟಿಯಿಂದ ಕೂಡಿದ್ದ ಮಹಿಳೆಯರ 76 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಕಂಪ್ಲಿಯ ತೇಜಶ್ವನಿ ಕಣಕ್ಕಿಳಿದಿದ್ದರು.
ಆರಂಭಿಕ ಸುತ್ತುಗಳಿಂದಲೇ ಉತ್ತಮ ಪ್ರದರ್ಶನ ನೀಡಿದ ಬಿಂಗಿ ತೇಜಶ್ವನಿ, ಬಲಿಷ್ಠ ಪ್ರತಿಸ್ಪರ್ಧಿಗಳ ಸವಾಲನ್ನು ತಮ್ಮ ಸಾಮರ್ಥ್ಯ, ಚುರುಕುತನ ಹಾಗೂ ಧೈರ್ಯದ ತಂತ್ರಗಾರಿಕೆಯಿಂದ ಎದುರಿಸಿದರು. ಪ್ರೇಕ್ಷಕರ ಹರ್ಷೋದ್ಗಾರದ ನಡುವೆ ಸತತ ಜಯ ಸಾಧಿಸುತ್ತಾ ಅಂತಿಮ ಸುತ್ತಿಗೆ ಪ್ರವೇಶಿಸಿದರು. ಫೈನಲ್ ಪಂದ್ಯದಲ್ಲಿ ತೀವ್ರ ಪೈಪೋಟಿ ನೀಡಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಗ್ರಾಮೀಣ ಭಾಗದ ಪ್ರತಿಭೆಯಾಗಿ ರಾಜ್ಯಮಟ್ಟದ ವೇದಿಕೆಯಲ್ಲಿ ಮಿಂಚಿದ ತೇಜಶ್ವನಿ ಅವರ ಸಾಧನೆಗೆ ತಂದೆ ಬಿಂಗಿ ಬೀರಲಿಂಗೇಶ್ವರ ಹಾಗೂ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿ, “ತೇಜಶ್ವನಿ ಅವರ ಕಠಿಣ ಪರಿಶ್ರಮ ಹಾಗೂ ಕ್ರೀಡೆಯ ಮೇಲಿನ ಪ್ರೀತಿಗೆ ಸಂದ ಜಯವಿದು. ಗ್ರಾಮೀಣ ಭಾಗದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ದಸರಾ ಸಿಎಂ ಕಪ್ನಂತಹ ದೊಡ್ಡ ವೇದಿಕೆಯಲ್ಲಿ ಪದಕ ಗೆದ್ದಿರುವುದು ಇಡೀ ಕಾಲೇಜಿಗೆ ಹೆಮ್ಮೆಯ ವಿಷಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಸಾಧಕ ಕ್ರೀಡಾಪಟುವಿಗೆ ಶುಭ ಹಾರೈಸಿದ್ದಾರೆ.






