Ballari | ಕೆಲಸದ ಸ್ಥಳ, ಕಚೇರಿಗಳಲ್ಲಿ ‘ಆಂತರಿಕ ದೂರು ಸಮಿತಿ’ ರಚನೆಗೆ ಡಿಸಿ ನಾಗೇಂದ್ರ ಪ್ರಸಾದ್ ಸೂಚನೆ

ಬಳ್ಳಾರಿ, ಜೂ.16: ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟಲು ಹಾಗೂ ಸುರಕ್ಷಿತ ವಾತಾವರಣ ನಿರ್ಮಿಸಲು ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ಆಂತರಿಕ ದೂರು ಸಮಿತಿ (ICC) ರಚಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಸೂಚಿಸಿದ್ದಾರೆ.
ಮಹಿಳೆಯರ ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ, ನಿಷೇಧ ಮತ್ತು ಪರಿಹಾರ ಕಾಯ್ದೆ-2013ರ ಕಲಂ 4ರ ಅನ್ವಯ 10 ಅಥವಾ ಅದಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ಪ್ರತಿಯೊಂದು ಸರ್ಕಾರಿ, ಅರೆ ಸರ್ಕಾರಿ ಕಚೇರಿ, ಇಲಾಖೆ, ಮಂಡಳಿ, ನಿಗಮ, ಸ್ಥಳೀಯ ಸಂಸ್ಥೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಕಡ್ಡಾಯವಾಗಿದೆ.
ಆದರೆ ಜಿಲ್ಲೆಯ ಹಲವು ಕಚೇರಿಗಳು, ಶಾಲಾ-ಕಾಲೇಜುಗಳು, ಕಾರ್ಖಾನೆಗಳು, ವ್ಯಾಪಾರ ಮಳಿಗೆಗಳು, ಗಾರ್ಮೆಂಟ್ಸ್ ಹಾಗೂ ಬ್ಯಾಂಕ್‌ಗಳು ಇನ್ನೂ ಸಮಿತಿ ರಚಿಸಿಲ್ಲ ಅಥವಾ ‘She-Box’ ಪೋರ್ಟಲ್‌ನಲ್ಲಿ ಅಗತ್ಯ ವಿವರಗಳನ್ನು ನೋಂದಾಯಿಸಿಲ್ಲ ಎಂಬುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ಇಲಾಖಾ ಮುಖ್ಯಸ್ಥರು 12 ದಿನಗಳೊಳಗೆ ತಮ್ಮ ವ್ಯಾಪ್ತಿಯಲ್ಲಿ ಆಂತರಿಕ ದೂರು ಸಮಿತಿಯನ್ನು ರಚಿಸಿ, ಸಮಿತಿ ರಚನೆ ಆದೇಶದ ಪ್ರತಿ, ಸದಸ್ಯರ ವಿವರಗಳು ಹಾಗೂ 2025ರ ವಾರ್ಷಿಕ ವರದಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ನಿಗದಿತ ಅವಧಿಯೊಳಗೆ ಸಮಿತಿ ರಚಿಸಿ ವರದಿ ಸಲ್ಲಿಸದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ನಿಯಮ ಪಾಲಿಸದ ಕಚೇರಿ ಮುಖ್ಯಸ್ಥರಿಗೆ ತಕ್ಷಣವೇ ಶೋಕಾಸ್ ನೋಟಿಸ್ ಜಾರಿ ಮಾಡಲಾಗುವುದು. ಜೊತೆಗೆ ನಿಯಮ ಉಲ್ಲಂಘನೆ ಕುರಿತು ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಕಾಯ್ದೆಯ ಕಲಂ 26ರ ಅಡಿಯಲ್ಲಿ ಸಂಬಂಧಿತ ಸಂಸ್ಥೆ ಅಥವಾ ಮಾಲೀಕರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಹಿಳಾ ಸಿಬ್ಬಂದಿಗೆ ದೂರು ಸಲ್ಲಿಸಲು ಸೂಕ್ತ ವ್ಯವಸ್ಥೆ ಇಲ್ಲದಿದ್ದರೆ ಉಂಟಾಗುವ ಆಡಳಿತಾತ್ಮಕ ಹಾಗೂ ಕಾನೂನು ಹೊಣೆಗಾರಿಕೆಯನ್ನು ಆಯಾ ಕಚೇರಿ ಮುಖ್ಯಸ್ಥರೇ ವೈಯಕ್ತಿಕವಾಗಿ ಹೊರಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






