Ballari | ಆ.7ರೊಳಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ರೈತರಿಗೆ ನೀರು ಬಿಡುಗಡೆಗೆ ಆಗ್ರಹ

ಬಳ್ಳಾರಿ/ಕಂಪ್ಲಿ, ಆ.5: ತುಂಗಭದ್ರಾ ಜಲಾಶಯದ ನೀರನ್ನು ರೈತರ ಬೆಳೆಗಳಿಗೆ ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಆ.7ರೊಳಗೆ ಮುನಿರಾಬಾದ್ ಕೇಂದ್ರ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ನೇತೃತ್ವದಲ್ಲಿ ರೈತರು ಹೊಸಪೇಟೆ ಸಮೀಪದ ಮುನಿರಾಬಾದ್‌ನ ತುಂಗಭದ್ರಾ ನೀರಾವರಿ ವಲಯ ಕಚೇರಿಯಲ್ಲಿ ಅಧೀಕ್ಷಕ ಅಭಿಯಂತರ ಎಸ್.ಜಿ. ಮಲ್ಲಿಗರಾವ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಬಿ.ವಿ. ಗೌಡ, ಈ ಬಾರಿ ಮುಂಗಾರು ತಡವಾಗಿ ಆರಂಭಗೊಂಡು ಮಳೆಯ ಕೊರತೆಯಿಂದ ರೈತರು ಸಂಕಷ್ಟ ಎದುರಿಸಿದ್ದರು. ಆದರೆ ಕಳೆದ ನಾಲ್ಕೈದು ದಿನಗಳಿಂದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ ಎಂದು ಹೇಳಿದರು.
ಪ್ರಸ್ತುತ ಜಲಾಶಯದಲ್ಲಿ ಸುಮಾರು 45 ಟಿಎಂಸಿ ನೀರು ಸಂಗ್ರಹವಿದ್ದು, 40 ಸಾವಿರ ಕ್ಯೂಸೆಕ್ಸ್‌ಗಿಂತ ಹೆಚ್ಚು ನೀರು ಒಳಹರಿವು ಆಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನೀರು ಹರಿದು ಬರುವ ನಿರೀಕ್ಷೆ ಇರುವುದರಿಂದ ನೀರಾವರಿ ಸಲಹಾ ಸಮಿತಿ ಸಭೆಯನ್ನು ತಕ್ಷಣ ಕರೆಯಬೇಕು ಎಂದು ಒತ್ತಾಯಿಸಿದರು.
ತುಂಗಭದ್ರಾ ನದಿಪಾತ್ರ, ಎಲ್‌ಎಲ್‌ಸಿ, ಎಚ್‌ಎಲ್‌ಸಿ ಹಾಗೂ ವಿಜಯನಗರ ಕಾಲುವೆ ಸೇರಿದಂತೆ ಕಾಲುವೆ ಆಶ್ರಿತ ಪ್ರದೇಶಗಳ ರೈತರಿಗೆ ಬೆಳೆ ಬೆಳೆಯಲು ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಆ.7ರೊಳಗೆ ಸಭೆ ನಡೆಸಿ ನೀರು ಬಿಡುಗಡೆ ಕುರಿತು ತೀರ್ಮಾನ ಕೈಗೊಳ್ಳದಿದ್ದರೆ ಮುನಿರಾಬಾದ್ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಖಾಜಾಹುಸೇನ್ ನಿಯಾಜಿ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.






