Ballari | ಎಂಎಸ್‌ಪಿಎಲ್‌ನಿಂದ 35 ಹೊಗೆರಹಿತ ಒಲೆಗಳ ವಿತರಣೆ

ಸಂಡೂರು/ಬಳ್ಳಾರಿ: ಎಂಎಸ್‌ಪಿಎಲ್ (ಬಾಲ್ಡೋಟಾ) ಸಂಸ್ಥೆಯ ಪರಿಸರ ಸುಸ್ಥಿರತೆ ಕಾರ್ಯಕ್ರಮ 2026–27ರ ಅಂಗವಾಗಿ ತಾಲೂಕಿನ ಡಿ. ಮಲ್ಲಾಪುರ ಗ್ರಾಮದಲ್ಲಿ ಸ್ವಸಹಾಯ ಸಂಘ (ಎಸ್‌ಎಚ್‌ಜಿ) ಸದಸ್ಯೆಯರಿಗೆ ಪರಿಸರ ಸ್ನೇಹಿ ಹೊಗೆರಹಿತ ಒಲೆಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.
ಗ್ರಾಮೀಣ ಕುಟುಂಬಗಳಲ್ಲಿ ಸ್ವಚ್ಛ ಇಂಧನ ಬಳಕೆಯನ್ನು ಉತ್ತೇಜಿಸುವುದು, ಮನೆಯೊಳಗಿನ ಹೊಗೆ ಮಾಲಿನ್ಯ ತಗ್ಗಿಸುವುದು ಹಾಗೂ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ರಕ್ಷಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಟ್ಟು 35 ಹೊಗೆರಹಿತ ಒಲೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಹಾಲಪ್ಪ, ಅರಣ್ಯಾಧಿಕಾರಿ ಚಿಕ್ಕಣ್ಣ, ಎಂಎಸ್‌ಪಿಎಲ್ ಸಂಸ್ಥೆಯ ಜನರಲ್ ಮ್ಯಾನೇಜರ್ (ಸಿಎಸ್‌ಆರ್) ರಾಮಬಾಬು, ಸೇಫ್ಟಿ ಮ್ಯಾನೇಜರ್ ಅಂಜಿನಿಕುಮಾರ್, ಲಾಜಿಸ್ಟಿಕ್ಸ್ ಮ್ಯಾನೇಜರ್ ಸುಬ್ಬರಾಯಡು, ವಿಜಯಕುಮಾರ ಪಿ.ಎಂ. (ಸಿಎಸ್‌ಆರ್), ಜಡೆಶ್ ಹಾಗೂ ಧನುಷ್ (ಸಿಸಿ–ಎಕ್ಸಿಕ್ಯೂಟಿವ್), ಗ್ರಾಮ ಪಂಚಾಯಿತಿ ಕಾರ್ಯನಿರ್ವಾಹಕ ಸದಸ್ಯರಾದ ನಾಗೇಂದ್ರಪ್ಪ ಮತ್ತು ಬೋರಣ್ಣ, ಗ್ರಾಮದ ಮುಖಂಡ ಚಿತ್ತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸ್ವಸಹಾಯ ಸಂಘದ ಸದಸ್ಯೆಯರು ಯೋಜನೆಯ ಪ್ರಯೋಜನಗಳ ಕುರಿತು ಮಾಹಿತಿ ಪಡೆದರು. ಹೊಗೆರಹಿತ ಒಲೆಗಳ ಬಳಕೆಯಿಂದ ಅಡುಗೆ ಸಮಯದಲ್ಲಿ ಹೊಗೆ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ಇಂಧನ ಉಳಿತಾಯ ಸಾಧ್ಯವಾಗಲಿದ್ದು, ಮಹಿಳೆಯರು ಹಾಗೂ ಮಕ್ಕಳ ಆರೋಗ್ಯದ ಮೇಲಿನ ದುಷ್ಪರಿಣಾಮಗಳು ತಗ್ಗಲಿವೆ ಎಂದು ತಿಳಿಸಲಾಯಿತು.
ಈ ವೇಳೆ ಮಾತನಾಡಿದ ಗಣ್ಯರು, ಪರಿಸರ ಸಂರಕ್ಷಣೆ, ಆರೋಗ್ಯಕರ ಜೀವನಶೈಲಿ ಹಾಗೂ ಸುಸ್ಥಿರ ಅಭಿವೃದ್ಧಿಗೆ ಇಂತಹ ಯೋಜನೆಗಳು ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿದ್ದು, ಸಾರ್ವಜನಿಕರು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.






