Ballari | ಜಿಲ್ಲಾ ಮಟ್ಟದ ‘ಶ್ರಾವಣ’ ಕವಿಗೋಷ್ಠಿ, ನೂತನ ದತ್ತಿ ಸ್ವೀಕಾರ, ಕೃತಿ ಬಿಡುಗಡೆ ಸಮಾರಂಭ

ಸಂಡೂರು/ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಬಿಕೆಜಿ ಫೌಂಡೇಶನ್ ಸಹಯೋಗದಲ್ಲಿ ಜಿಲ್ಲಾ ಮಟ್ಟದ ‘ಶ್ರಾವಣ’ ಕವಿಗೋಷ್ಠಿ, ನೂತನ ದತ್ತಿ ಸ್ವೀಕಾರ ಹಾಗೂ ಕೃತಿ ಬಿಡುಗಡೆ ಸಮಾರಂಭ ಸಂಡೂರಿನಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ. ಪ್ರಕಾಶಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಬಿ. ನಾಗನಗೌಡ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರೊ. ಎಸ್. ಚಂದ್ರಶೇಖರ್ ರಚಿಸಿರುವ ‘ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು’ ಕೃತಿ ಬಿಡುಗಡೆ ಮಾಡಲಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತ, ಶಿಕ್ಷಣ, ಕೈಗಾರಿಕೆ ಸೇರಿದಂತೆ ಆಧುನಿಕ ಮೈಸೂರು ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನೂತನ ದತ್ತಿ ನೀಡಿದ ಬಿ.ಆರ್. ಮಸೂತಿ, ಹೆಚ್.ಎನ್. ಭೋಸ್ಲೆ, ಬಿ. ರುದ್ರೇಶ್ ಶೆಟ್ಟಿ, ಜಿ. ಸಾಂಬಣ್ಣ, ಬಿ. ಶಿವಕುಮಾರ್, ರಮೇಶ್ ಗಡದ್ ಹಾಗೂ ಡಾ. ತಿಪ್ಪೇರುದ್ರ ಸಂಡೂರು ಅವರನ್ನು ಸನ್ಮಾನಿಸಲಾಯಿತು.
ಬಿಕೆಜಿ ಗಣಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ರಾಜಶೇಖರ ಬೆಲ್ಲದ್ ಮಾತನಾಡಿ, ಬಿಕೆಜಿ ಫೌಂಡೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಡೆಯುತ್ತಿರುವ ಸಾಹಿತ್ಯ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಂಸ್ಥೆ ನಿರಂತರವಾಗಿ ಬೆಂಬಲ ನೀಡುತ್ತಿದೆ. ಸಂಸ್ಥೆಯ ಬಹುತೇಕ ಉದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳು ಅಚ್ಚ ಕನ್ನಡದಲ್ಲೇ ವ್ಯವಹರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ರಕ್ತದಾನ ಶಿಬಿರ, ಸಮಾಜಮುಖಿ ಚಟುವಟಿಕೆಗಳು ಹಾಗೂ ಸಂಡೂರು ಪ್ರದೇಶದಲ್ಲಿ ಹಸಿರು ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಗಿಡ-ಮರಗಳನ್ನು ಬೆಳೆಸುವ ಕಾರ್ಯಗಳನ್ನು ಸಂಸ್ಥೆ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಯುವಜನತೆ ಹಾಗೂ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಉತ್ತಮ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕವಿಗಳಿಂದ ಕಾವ್ಯ ವಾಚನ :
ಹಿರಿಯ ಕವಯತ್ರಿ ಎನ್.ಡಿ. ವೆಂಕಮ್ಮ ಅಧ್ಯಕ್ಷತೆಯಲ್ಲಿ ನಡೆದ ‘ಶ್ರಾವಣ’ ಕವಿಗೋಷ್ಠಿಯಲ್ಲಿ ಡಾ. ಬಡಿಗೇರ ಮೌನೇಶ್, ಕೊಟ್ರಜ್ಜಿ ಕರಿಬಸಮ್ಮ, ನಾಗರಾಜ ಸೊರಮ್ಮನಹಳ್ಳಿ, ಗೀತಾ ಕುಲಕರ್ಣಿ, ಕಾರ್ತಿಕ್ ಆಚಾರ್ಯ, ಚೆನ್ನಬಸಪ್ಪ ಹೊಳಲು ಹಾಗೂ ವಾಸಂತಿ ಸಾಲಿನಿ ಸೇರಿದಂತೆ ವಿವಿಧ ಭಾಗಗಳ ಕವಿಗಳು ಕವಿತೆಗಳನ್ನು ವಾಚಿಸಿದರು.
ಸಮಾಜದಲ್ಲಿ ಜಾಗೃತಿ ಮೂಡಿಸುವ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಹಾಗೂ ಸಮಾಜವನ್ನು ಮರುನಿರ್ಮಾಣ ಮಾಡುವ ಶಕ್ತಿಯಾಗಿ ಸಾಹಿತ್ಯ ರೂಪುಗೊಳ್ಳಬೇಕು ಎಂಬ ಆಶಯ ಕವಿಗೋಷ್ಠಿಯಲ್ಲಿ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅವಿಭಜಿತ ಬಳ್ಳಾರಿ ಜಿಲ್ಲಾಧ್ಯಕ್ಷ ಡಾ. ನಿಶ್ಚಿ ರುದ್ರಪ್ಪ, ಸಂಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಸಾಹಿತಿ ದಮ್ಮೂರು ಮಲ್ಲಿಕಾರ್ಜುನ ಸೇರಿದಂತೆ ಸಾಹಿತಿಗಳು, ಕವಿಗಳು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






