Ballari | ಬರಗಾಲದಲ್ಲಿ ವಲಸೆ ಬೇಡ; ವಿಬಿ-ಜಿ ರಾಮ್‌ಜಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ : ಇಒ ಮಡಗಿನ ಬಸಪ್ಪ

ಸಂಡೂರು/ಬಳ್ಳಾರಿ: ಬರಗಾಲದ ಪರಿಸ್ಥಿತಿಯಲ್ಲಿ ಗ್ರಾಮೀಣ ಕೂಲಿಕಾರ್ಮಿಕರು ಉದ್ಯೋಗಕ್ಕಾಗಿ ವಲಸೆ ಹೋಗದೆ, ತಮ್ಮ ಗ್ರಾಮಗಳಲ್ಲಿಯೇ ವಿಬಿ-ಜಿ ರಾಮ್‌ಜಿ ಯೋಜನೆಯಡಿ ಲಭ್ಯವಿರುವ ಕಾಮಗಾರಿಗಳಲ್ಲಿ ಭಾಗವಹಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಸಂಡೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಕರೆ ನೀಡಿದರು.
ಸೋಮವಾರ ದರೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ದರೋಜಿ ಗ್ರಾಮ ಹಾಗೂ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗ ಗ್ರಾಮಗಳಿಗೆ ಭೇಟಿ ನೀಡಿ, ವಿಬಿ-ಜಿ ರಾಮ್‌ಜಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಕಾಮಗಾರಿಗಳ ಗುಣಮಟ್ಟ, ಪ್ರಗತಿ ಹಾಗೂ ಕಾರ್ಮಿಕರ ಹಾಜರಾತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಹೊಸ ದರೋಜಿ ಗ್ರಾಮದಲ್ಲಿ ನೀರಾವರಿ ಕಾಲುವೆ ಹೂಳೆತ್ತುವ ಕಾಮಗಾರಿ ಹಾಗೂ ಜೋಗ ಗ್ರಾಮದಲ್ಲಿ ಅಮೃತ ಸರೋವರ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿದ ಅವರು, ನಿಗದಿತ ಅವಧಿಯೊಳಗೆ ಗುಣಮಟ್ಟದಿಂದ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೂಲಿಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಯೋಜನೆಯಡಿ ದಿನಕ್ಕೆ ₹382 ಕೂಲಿ ನೀಡಲಾಗುತ್ತಿದ್ದು, ಪ್ರತಿ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ 318 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ರೈತರಿಗೆ 60 ದಿನಗಳ ವಿಶೇಷ ಅವಕಾಶ ಹಾಗೂ ವೈಯಕ್ತಿಕ, ಸ್ವ-ಸಹಾಯ ಸಂಘಗಳ ಜೀವನೋಪಾಯ ಮತ್ತು ಗ್ರಾಮಾಭಿವೃದ್ಧಿಗೆ ಸಂಬಂಧಿಸಿದ 90 ಕಾಮಗಾರಿಗಳಿಗೂ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.
ಬರಗಾಲದ ಸಂದರ್ಭದಲ್ಲಿ ಯಾವುದೇ ಕಾರ್ಮಿಕರು ವಲಸೆ ಹೋಗದೆ, ಗ್ರಾಮದಲ್ಲಿಯೇ ಲಭ್ಯವಿರುವ ಕಾಮಗಾರಿಗಳಲ್ಲಿ ನಿರಂತರವಾಗಿ ಕೆಲಸ ಮಾಡುವ ಮೂಲಕ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ ಗ್ರಾಮೀಣ ಅಭಿವೃದ್ಧಿಗೂ ನೆರವಾಗಲಿದೆ ಎಂದು ಹೇಳಿದರು.
ಇದೇ ವೇಳೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಯುಕ್ತಧಾರ ಪೋರ್ಟಲ್‌ನಲ್ಲಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಮಾಹಿತಿಯನ್ನು ತ್ವರಿತವಾಗಿ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ, ವೇಗ ಹಾಗೂ ಗುಣಮಟ್ಟ ಕಾಪಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ಪರಿಶೀಲನೆ ವೇಳೆ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತಾಂತ್ರಿಕ ಸಂಯೋಜಕರು ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.






