Ballari | ದೇವಲಾಪುರಕ್ಕೆ ಪಿಯು ಕಾಲೇಜು ತರಲು ಪ್ರಯತ್ನ: ಶಾಸಕ ಗಣೇಶ ಭರವಸೆ

ಬಳ್ಳಾರಿ/ಕಂಪ್ಲಿ: ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಸಿಗುವಂತೆ ಮುಂದಿನ ದಿನಗಳಲ್ಲಿ ದೇವಲಾಪುರಕ್ಕೆ ಪಿಯು ಕಾಲೇಜು ತರಲು ಶಕ್ತಿ ಮೀರಿ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಜೆ.ಎನ್. ಗಣೇಶ ಭರವಸೆ ನೀಡಿದರು.
ತಾಲೂಕಿನ ದೇವಲಾಪುರ ಗ್ರಾಮದ ಕಣವಿಮಾರೆಮ್ಮ ದೇವಸ್ಥಾನದ ರಸ್ತೆಯ ಬಳಿಯ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರಿಸರ ಮತ್ತು ಆರೋಗ್ಯದ ದೃಷ್ಟಿಯಿಂದ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿದರು. ಗ್ರಾಮೀಣ ಭಾಗದ ಮಕ್ಕಳು ಬಡತನದಲ್ಲಿದ್ದರೂ ಶಿಕ್ಷಣದ ಮೂಲಕ ಉತ್ತಮ ಹುದ್ದೆಗಳನ್ನು ಪಡೆಯಬೇಕು. ಪೋಷಕರ ಕಷ್ಟಗಳನ್ನು ಅರಿತು ಶ್ರಮಪಟ್ಟು ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ದೇವರಮನೆ ಪಂಪಾಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾಗಿರುವುದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.
ಮುಖ್ಯಗುರು ಎಚ್.ಪಿ.ಸೋಮಶೇಖರ ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ಕಟ್ಟಡದಿಂದ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ದೊರೆಯುತ್ತಿದೆ. ಆದರೆ ಹತ್ತನೇ ತರಗತಿ ಬಳಿಕ ವಿದ್ಯಾರ್ಥಿನಿಯರು ದೂರದ ಕಾಲೇಜುಗಳಿಗೆ ತೆರಳಲು ಹಿಂಜರಿಯುತ್ತಿರುವುದರಿಂದ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಶಾಲೆಯನ್ನು ಪಿಯು ಕಾಲೇಜ್ ಆಗಿ ಮೇಲ್ದರ್ಜೆಗೆ ಏರಿಸಿ, ಕಾಂಪೌಂಡ್ ಗೋಡೆ ಮತ್ತು ಹೈಮಾಸ್ ಲೈಟ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬೂದಾಳ್ ರವಿ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ಪೂಜಾರಿ ಈರಮ್ಮ, ಮಾಜಿ ಉಪಾಧ್ಯಕ್ಷ ನಾಗರಾಜ, ಸೊಸೈಟಿ ಅಧ್ಯಕ್ಷ ಹನುಮಂತ, ಬಿಆರ್‌ಸಿ ಮನೋಹರ, ಬಿಸಿ ಊಟ ಸಹಾಯಕ ನಿರ್ದೇಶಕ ಶಿವನಾಯ್ಕ, ವಿಎಸ್‌ಕೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಕೆ. ಶಿವಕುಮಾರ ಸೇರಿದಂತೆ ಅನೇಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







