Ballari | ಕಿತ್ತೂರು ರಾಣಿ ಚೆನ್ನಮ್ಮನ ಧೈರ್ಯ, ದೇಶಪ್ರೇಮದ ಗುಣಗಳನ್ನು ಮೈಗೂಡಿಸಿಕೊಳ್ಳಿ: ಅನಿಲ್ ಕುಮಾರ್

ಸಂಡೂರು/ಬಳ್ಳಾರಿ: ಮಹಿಳೆಯರು ಸಬಲರಾಗಬೇಕು, ಧೈರ್ಯಶಾಲಿಗಳಾಗಬೇಕು ಹಾಗೂ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ಕಿತ್ತೂರು ರಾಣಿ ಚೆನ್ನಮ್ಮನಲ್ಲಿದ್ದ ಧೈರ್ಯ, ಸಾಹಸ ಮತ್ತು ದೇಶಪ್ರೇಮದ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಜಿ. ಅನಿಲ್ ಕುಮಾರ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮಾಜಿಯ 202ನೇ ವಿಜಯೋತ್ಸವ ಹಾಗೂ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
18ನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಾಜಿ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರಲ್ಲಿದ್ದ ದೇಶಪ್ರೇಮ ಮತ್ತು ಹೋರಾಟದ ಮನೋಭಾವ ನಮ್ಮಲ್ಲಿಯೂ ಬೆಳೆಯಬೇಕು. ಮಹಿಳೆಯರು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.
ಉಪನ್ಯಾಸ ನೀಡಿದ ಶಿಕ್ಷಕ ಪ್ರಕಾಶ್ ಕೆ.ಬಿ. ಮಾತನಾಡಿ, ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯ ವಿರುದ್ಧ ಹೋರಾಡಿದ ಧೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಾಜಿ. ದಕ್ಷಿಣ ಭಾರತದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ವೀರ ವನಿತೆಯಾಗಿ ಅವರು ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರ ಧೈರ್ಯ, ಹೋರಾಟದ ಮನೋಭಾವ ಮತ್ತು ದೇಶಪ್ರೇಮವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳುವುದರ ಜೊತೆಗೆ ಮಕ್ಕಳಿಗೂ ಇಂತಹ ಮಹನೀಯರ ಜೀವನಾದರ್ಶಗಳನ್ನು ತಿಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಗಡಾದ್ ರಮೇಶ್, ಕಾರ್ಯದರ್ಶಿ ಬಸವರಾಜ ಬಣಕಾರ, ಖಜಾಂಚಿ ಬನ್ನಿಹಟ್ಟಿ ಮಹೇಶ್, ತಾಲೂಕು ಘಟಕದ ಸದಸ್ಯರು, ಸುಶೀಲಾನಗರ ಗ್ರಾಮದ ಮುಖಂಡರಾದ ತಡಾಳ್ ಮಹೇಶ್ ಹಾಗೂ ಷಣ್ಮುಖಪ್ಪ, ಬಂಡ್ರಿ ಗ್ರಾಮದ ನಿಕಟಪೂರ್ವ ಅಧ್ಯಕ್ಷ ಪಿ. ರವಿಕುಮಾರ್, ಗೌರವಾಧ್ಯಕ್ಷ ಮೇಲು ಸೀಮೆ ಶಂಕ್ರಪ್ಪ ಸೇರಿದಂತೆ ತಾಳೂರು, ತಾರಾನಗರ, ಜೋಗ, ಬಂಡ್ರಿ, ಸುಶೀಲಾನಗರ ಹಾಗೂ ಸಂಡೂರು ಸೇರಿದಂತೆ ವಿವಿಧ ಗ್ರಾಮಗಳ ಸಮಾಜದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.






