Ballari | ಸ್ವಚ್ಛತೆ, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಿ : ಎಂ.ಎಲ್.ಕೆ.ನಾಯ್ಡು
‘ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್’ ಅಭಿಯಾನಕ್ಕೆ ಚಾಲನೆ

ಸಂಡೂರು/ಬಳ್ಳಾರಿ: ಸ್ವಚ್ಛತಾ ಹಿ ಸೇವಾ ಅಭಿಯಾನ–2026ರ ಅಂಗವಾಗಿ ‘ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್’ ಎಂಬ ಶೀರ್ಷಿಕೆಯಡಿ ಸಂಡೂರು ಪಟ್ಟಣದ ಕಾಲ್ಪಟ್ಟಿಯಲ್ಲಿರುವ ಸ್ಕಂದಪುರ ಪಾರ್ಕ್‌ನಲ್ಲಿ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಪಾರ್ಕ್ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ಇದೇ ವೇಳೆ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಲ್.ಕೆ. ನಾಯ್ಡು, ಯುವಜನರು ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜತೆಗೆ ಪರಿಸರ ಕಾಳಜಿ ಹಾಗೂ ಸ್ವಚ್ಛತೆಯ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಲ್ಪಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಮರುಬಳಕೆಯ ವಸ್ತುಗಳನ್ನು ಬಳಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಹೊರಗೆ ತೆರಳುವಾಗ ಎರಡು ಬಟ್ಟೆಯ ಚೀಲಗಳು ಹಾಗೂ ಚಹಾ ಸೇವನೆಗೆ ಎರಡು ಸ್ಟೀಲ್ ಲೋಟಗಳನ್ನು ತಮ್ಮೊಂದಿಗೆ ಕೊಂಡೊಯ್ಯುವ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸುವ ಅಭ್ಯಾಸ ರೂಢಿಸಿಕೊಂಡಿರುವುದಾಗಿ ತಿಳಿಸಿದರು. ತಮ್ಮ 83 ವರ್ಷದ ತಾಯಿ ಪ್ರತಿದಿನ ಪಾರ್ಕ್‌ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು, ಸಂಗ್ರಹಿಸಿದ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡುವ ಮೂಲಕ ಸ್ವಚ್ಛತೆಗೆ ಮಾದರಿಯಾಗಿದ್ದಾರೆ ಎಂದು ಹೆಮ್ಮೆಯಿಂದ ಹಂಚಿಕೊಂಡರು.
ಪುರಸಭೆ ಮುಖ್ಯಾಧಿಕಾರಿ ವಿನಯ್ ಕುಮಾರ್ ಗೌಡ ಮಾತನಾಡಿ, ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಹಾಗೂ ಸುಂದರ ಸಮಾಜ ನಿರ್ಮಿಸಲು ಸಾಧ್ಯ. ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ಕಸವನ್ನು ಮೂಲದಲ್ಲಿಯೇ ವಿಂಗಡಿಸಿ ಪುರಸಭೆಯ ಸ್ವಚ್ಛತಾ ಕಾರ್ಯಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಶ್ರೀಶೈಲೇಶ್ವರ ಶಾಲೆಯ ಶಿಕ್ಷಕ ಅಜಂಪೀರ್ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸ್ವಚ್ಛತೆ, ಹಸಿರು ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ಉಳಿಸಿಕೊಡಬೇಕು ಎಂದರು.
ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಪುತ್ರಿ ಮಾತನಾಡಿ, ತಮ್ಮ ತಂದೆ-ತಾಯಿ ಪ್ರತಿದಿನ ನಿರ್ವಹಿಸುವ ಸ್ವಚ್ಛತಾ ಕಾರ್ಯ ಎಷ್ಟು ಕಷ್ಟಕರವಾಗಿದೆ ಎಂಬುದು ಶ್ರಮದಾನದಲ್ಲಿ ಪಾಲ್ಗೊಂಡ ಬಳಿಕ ಮತ್ತಷ್ಟು ಅರ್ಥವಾಯಿತು ಎಂದು ಭಾವೋದ್ವೇಗದಿಂದ ಅನಿಸಿಕೆ ಹಂಚಿಕೊಂಡರು.
ಶ್ರೀಶೈಲೇಶ್ವರ ಬಿ.ಕಾಂ ವಿದ್ಯಾರ್ಥಿಗಳು ಸ್ವಚ್ಛತೆಯ ಮಹತ್ವ ಸಾರುವ ಜಾಗೃತಿ ಮೂಡಿಸುವ ರೀಲ್ಸ್ ಸಿದ್ಧಪಡಿಸಿ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆಯ ಪರಿಸರ ಅಭಿಯಂತರರಾದ ಅನ್ನಪೂರ್ಣ, ಆರೋಗ್ಯ ನಿರೀಕ್ಷಕಿ ಶಿವರಂಜಿನಿ, ನೈರ್ಮಲ್ಯ ಮೇಲ್ವಿಚಾರಕರಾದ ಶಾಂತ, ವಿಜಯ್, ಕಿರಣ್, ಪುರಸಭೆ ಸಿಬ್ಬಂದಿ, ಕಮ್ಯೂನಿಟಿ ಮೊಬೈಲೈಸರ್‌ಗಳಾದ ಕಾವ್ಯಾಂಜಲಿ, ಚೈತ್ರ, ಮಾರೆಕ್ಕ, ದೀನಾ, ಅನಿತಾ, ಶಿಕ್ಷಕರಾದ ಅಜಂಪೀರ್, ಸುಕನ್ಯ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






