Ballari | ಭೂಸ್ವಾಧೀನ, ಗಣಿಗಾರಿಕೆ ವಿರೋಧಿಸಿ ರೈತರಿಂದ ಪ್ರತಿಭಟನೆ

ಸಂಡೂರು/ಬಳ್ಳಾರಿ : ತಾಲೂಕಿನ ಸೋಮಲಾಪುರ ಗ್ರಾಮದಿಂದ ತಾಲೂಕು ಕಚೇರಿವರೆಗೆ ಕರ್ನಾಟಕ ರಾಜ್ಯ ರೈತ ಸಂಘ, ಜನಸಂಗ್ರಾಮ ಪರಿಷತ್ ಹಾಗೂ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಎತ್ತಿನ ಬಂಡಿ, ಬೈಕ್ ಹಾಗೂ ಟ್ರ್ಯಾಕ್ಟರ್ ಜಾಥಾ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲಾಯಿತು.
ಜಾಥಾದ ಬಳಿಕ ತಹಶೀಲ್ದಾರರ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ ರೈತರು, ಸಂಡೂರು ತಾಲೂಕಿನಲ್ಲಿ ನಿರಂತರ ಗಣಿಗಾರಿಕೆ ಮತ್ತು ಕೈಗಾರಿಕಾ ವಿಸ್ತರಣೆಯಿಂದ ರೈತರ ಫಲವತ್ತಾದ ಭೂಮಿ, ಅರಣ್ಯ, ಪರಿಸರ ಹಾಗೂ ಜಲಸಂಪನ್ಮೂಲಗಳಿಗೆ ಗಂಭೀರ ಹಾನಿಯಾಗುತ್ತಿದೆ ಎಂದು ಆರೋಪಿಸಿದರು.
ಯಶವಂತನಗರ–ಸೋಮಲಾಪುರ ಪ್ರದೇಶದಲ್ಲಿ ರೈತರ ವಿರೋಧದ ನಡುವೆಯೇ ಎಂಎಸ್‌ಪಿಎಲ್ ಹಾಗೂ ಆರ್‌ಪಿಸಿಎಲ್ (ಬಿಕೆಜಿ) ಸೇರಿ ಬೃಹತ್ ಕೈಗಾರಿಕೆಗಳಿಗೆ ಭೂಮಿ ನೀಡಲಾಗುತ್ತಿದೆ. ಇದರಿಂದ ಫಲವತ್ತಾದ ಕೃಷಿ ಭೂಮಿ ಮತ್ತು ಪ್ರಸಿದ್ಧ ಮಾವು ಬೆಳೆ ಪ್ರದೇಶಗಳು ನಾಶವಾಗುತ್ತಿದ್ದು, ರೈತರ ಜೀವನೋಪಾಯಕ್ಕೆ ಧಕ್ಕೆ ಉಂಟಾಗಿದೆ ಎಂದು ದೂರಿದರು.
ಕೈಗಾರಿಕೆಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ಅರಣ್ಯ ನಾಶ, ಜಲಮೂಲಗಳ ಹಾನಿ ಹಾಗೂ ಕೃಷಿ ಉತ್ಪಾದನೆ ಕುಸಿತದಂತಹ ಸಮಸ್ಯೆಗಳು ಎದುರಾಗಿವೆ. ಯಶವಂತನಗರ ಮತ್ತು ಕುಂಟೇನಹಳ್ಳಿ ಭಾಗಗಳಲ್ಲಿ ಭಾರೀ ವಾಹನಗಳ ಸಂಚಾರದಿಂದ ಧೂಳು ಹೆಚ್ಚಾಗಿ ಬೆಳೆಗಳಿಗೆ ಹಾನಿಯಾಗುತ್ತಿದ್ದು, ಮಾವು ಉತ್ಪಾದನೆ ಮೇಲೂ ದುಷ್ಪರಿಣಾಮ ಉಂಟಾಗಿದೆ. ಆದ್ದರಿಂದ ಲಾರಿಗಳ ಸಂಚಾರಕ್ಕೆ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಹೈಕೋರ್ಟ್ ಆದೇಶದಂತೆ ರೈತರ ಹೆಸರನ್ನು ಪಹಣಿಯಲ್ಲಿ ಪುನಃ ದಾಖಲಿಸಬೇಕು. ಮುಂದಿನ ದಿನಗಳಲ್ಲಿ ರೈತರ ಭೂಮಿಯನ್ನು ಯಾವುದೇ ಕಾರಣಕ್ಕೂ ಸ್ವಾಧೀನಪಡಿಸಿಕೊಳ್ಳಬಾರದು. ಜೊತೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಧಿ, ಡಿಎಂಎಫ್, ಸಿಎಸ್‌ಆರ್ ಹಾಗೂ ಕೆಎಂಇಆರ್‌ಸಿ ನಿಧಿಗಳನ್ನು ಕೃಷಿ, ಶಿಕ್ಷಣ, ಉದ್ಯೋಗ ಮತ್ತು ನೀರಾವರಿ ಅಭಿವೃದ್ಧಿಗೆ ಬಳಸಬೇಕು ಎಂದು ಆಗ್ರಹಿಸಿದರು.
ತುಂಗಭದ್ರಾ ಹಿನ್ನೀರಿನಿಂದ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೊಳಿಸಿ, ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಂಡರೆ ರೈತರಿಗೆ ಹಾಗೂ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಮೇಟಿ, ಜನಸಂಗ್ರಾಮ ಪರಿಷತ್ ಅಧ್ಯಕ್ಷ ಟಿ.ಎಂ. ಶಿವಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಎ.ಜೆ. ಶ್ರೀಶೈಲ, ಜಿಲ್ಲಾ ಅಧ್ಯಕ್ಷ ಎಂ.ಎಲ್.ಕೆ. ನಾಯ್ಡು, ಜಿಲ್ಲಾ ಉಪಾಧ್ಯಕ್ಷ ವಿರೂಪನಗೌಡ ಸೇರಿದಂತೆ ನೂರಾರು ರೈತರು, ಗ್ರಾಮಸ್ಥರು ಹಾಗೂ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.
ಮನವಿ ಸ್ವೀಕರಿಸಿದ ತಹಶೀಲ್ದಾರ ಅನಿಲ್ ಕುಮಾರ್, ರೈತರ ಬೇಡಿಕೆಗಳನ್ನು ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.






