Ballari | ವಿದ್ಯುತ್ ಪೂರೈಕೆ ಹೆಚ್ಚಿಸುವಂತೆ ಜೆಸ್ಕಾಂಗೆ ರೈತರ ಮನವಿ

ಬಳ್ಳಾರಿ/ಕಂಪ್ಲಿ : ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ 6 ಗಂಟೆಗಳ ವಿದ್ಯುತ್ ಪೂರೈಕೆಯ ಜೊತೆಗೆ ಹೆಚ್ಚುವರಿ 3 ಗಂಟೆಗಳ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಂಪ್ಲಿ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತರು ಗುಲ್ಬರ್ಗಾ ವಿದ್ಯುತ್ ಸರಬರಾಜು ಸಂಸ್ಥೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಬರೆದ ಮನವಿ ಪತ್ರವನ್ನು ಎಇಇ ಶ್ರೀನಿವಾಸ ಪ್ರಸಾದ್ ಅವರಿಗೆ ಸಲ್ಲಿಸಿದರು.
ಪ್ರತಿಭಟನೆ ಬಳಿಕ ಮಾತನಾಡಿದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಹಾಗೂ ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ್, ಕಂಪ್ಲಿ ತಾಲೂಕಿನಲ್ಲಿ ಇದುವರೆಗೆ ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆಗಳ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಕಳೆದ 2–3 ದಿನಗಳಿಂದ ಒಂದು ಗಂಟೆ ಕಡಿತಗೊಳಿಸಿ ಕೇವಲ 6 ಗಂಟೆಗಳ ವಿದ್ಯುತ್ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ತೀವ್ರ ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್‌ವೆಲ್‌ಗಳ ನೀರಿನ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ಸಾಲ ಮಾಡಿ ಬೆಳೆದಿರುವ ಭತ್ತ, ಮೆಣಸಿನಕಾಯಿ, ಬಾಳೆ ಸೇರಿದಂತೆ ಪ್ರಮುಖ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ರೈತರ ಹಿತದೃಷ್ಟಿಯಿಂದ ಕೂಡಲೇ 6 ಗಂಟೆಗಳ ವಿದ್ಯುತ್ ಜೊತೆಗೆ ಹೆಚ್ಚುವರಿ 3 ಗಂಟೆಗಳ ತ್ರಿಫೇಸ್ ವಿದ್ಯುತ್ ಪೂರೈಸಬೇಕು. ವಿದ್ಯುತ್ ಪೂರೈಕೆ ಮಾಡದಿದ್ದರೆ ರೈತರ ಬೆಳೆ ನಷ್ಟಕ್ಕೆ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಜೆಸ್ಕಾಂ ಅಧಿಕಾರಿಗಳು ತಕ್ಷಣವೇ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಸೆಪ್ಟೆಂಬರ್ 21ರಂದು ಬಳ್ಳಾರಿಯ ಮುಖ್ಯ ಅಭಿಯಂತರರ ಜೆಸ್ಕಾಂ ಕಚೇರಿಗೆ ರೈತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜೆಇ ಮಹಾಂತೇಶ, ರೈತ ಮುಖಂಡರಾದ ವೆಂಕಟರಾಮರಾಜು, ಇಟಗಿ ಶರಣೇಗೌಡ, ಆನಂದರೆಡ್ಡಿ ಸುದರ್ಶನ, ನಾಗರಾಜ, ಮಲ್ಲಯ್ಯ, ರಮೇಶ್, ನಾಗಪ್ಪ, ಈರಣ್ಣ, ರವಿಚಂದ್ರ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.






