ಬಳ್ಳಾರಿ | ಇಬ್ಬರು ಮಕ್ಕಳನ್ನು ಕಾಲುವೆಗೆ ತಳ್ಳಿದ ತಂದೆ: ಓರ್ವ ಬಾಲಕಿಯ ಮೃತದೇಹ ಪತ್ತೆ

ಬಳ್ಳಾರಿ: ತಂದೆಯೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕಾಲುವೆಗೆ ತಳ್ಳಿದ ಘಟನೆ ಬಳ್ಳಾರಿ ಗಡಿಭಾಗದ ಆಂಧ್ರಪ್ರದೇಶದ ಬೊಮ್ಮನ ಹಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನೇಮಕಲ್ ಗ್ರಾಮದಲ್ಲಿ ನಡೆದಿದ್ದು, ನಾಪತ್ತೆಯಾದ ಇಬ್ಬರು ಬಾಲಕಿಯರಲ್ಲಿ ಓರ್ವ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬ ಬಾಲಕಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬೊಮ್ಮನ ಹಾಳ್ ಬಳಿಯ ನೇಮಕಲ್ ಗ್ರಾಮದ ನಿವಾಸಿ ಕಲ್ಲಪ್ಪ 5 ಮತ್ತು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತನ್ನ ಇಬ್ಬರು ಹೆಣ್ಣು ಮಕ್ಕಳ ಜತೆಗೆ ರವಿವಾರ ಊರಿಗೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ದಾನೆ. ನಂತರ ತನ್ನಿಬ್ಬರು ಮಕ್ಕಳನ್ನು ಕಾಲುವೆಗೆ ತಳ್ಳಿದ ಕಲ್ಲಪ್ಪ ಬಳಿಕ ಒಬ್ಬನೇ ಊರಿಗೆ ಮರಳಿದ್ದು ಮಕ್ಕಳ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಅನುಮಾನಗೊಂಡ ಮನೆಯವರು ವಿಚಾರಿಸಿ ಠಾಣೆಗೆ ದೂರು ನೀಡಿದ್ದಾರೆ.
ಮಂಗಳವಾರ ಸಿರಿಗೇರಿ ಕ್ರಾಸ್ ಬಳಿಯ ತುಂಗಭದ್ರಾ ಬಲದಂಡೆ ಕಾಲುವೆ (ಎಲ್ ಎಲ್ ಸಿ) ಯಲ್ಲಿ ಕಿರಿಯ ಪುತ್ರಿ ಚಂದ್ರಮ್ಮ (9) ಮೃತದೇಹ ಪತ್ತೆಯಾಗಿದ್ದು,ಹಿರಿಯ ಪುತ್ರಿ ಅನಸೂಯ (11) ಪತ್ತೆಗಾಗಿ ಸೀಮಾಂದ್ರದ ಪೊಲೀಸಲು ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.





