Ballari | ವಸತಿ ಯೋಜನೆ ಸೇರ್ಪಡೆಗೆ ಮೇ 15ರವರೆಗೆ ಅಂತಿಮ ಅವಕಾಶ

ಸಂಡೂರು/ಬಳ್ಳಾರಿ: ರಾಜ್ಯ ಸರ್ಕಾರದ ಮಹತ್ವದ ವಸತಿ ಯೋಜನೆಗಳ ಪ್ರಯೋಜನವನ್ನು ಯಾವುದೇ ಅರ್ಹ ಫಲಾನುಭವಿಗಳು ತಪ್ಪಿಸಿಕೊಳ್ಳದಂತೆ ಮಾಡಲು, 2018ರ ವಸತಿ ಮತ್ತು ನಿವೇಶನ ರಹಿತರ ಸಮೀಕ್ಷೆ ಪಟ್ಟಿಯಲ್ಲಿ ಬಿಟ್ಟು ಹೋಗಿರುವವರನ್ನು ಸೇರಿಸಿಕೊಳ್ಳಲು ಮೇ 15, 2026ರವರೆಗೆ ಅಂತಿಮ ಅವಕಾಶ ನೀಡಲಾಗಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ 2018ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಸತಿರಹಿತರು ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಸಲಾಗಿದ್ದು, ಆ ಪಟ್ಟಿಯಲ್ಲಿರುವ ಅರ್ಹರಿಗೆ ರಾಜ್ಯ ವಸತಿ ಯೋಜನೆಗಳಡಿ ಮನೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಬಳಿಕ 2022ರಲ್ಲಿ ಸಮೀಕ್ಷೆ ಪಟ್ಟಿಯನ್ನು ಮರುಪರಿಶೀಲಿಸಿ ಅನರ್ಹರನ್ನು ಕೈಬಿಟ್ಟು, ಹೊಸ ಅರ್ಹರನ್ನು ಸೇರಿಸುವಂತೆ ಸರ್ಕಾರ ಸೂಚಿಸಿತ್ತು.
ಇದೀಗ 2026-27ನೇ ಸಾಲಿನ ಆಯವ್ಯಯದಲ್ಲಿ ವಿವಿಧ ವಸತಿ ಯೋಜನೆಗಳಡಿ BLC ಆಧಾರಿತ 1 ಲಕ್ಷ ಮನೆಗಳ ಗುರಿ ನಿಗದಿಪಡಿಸಲಾಗಿದೆ. ಅರ್ಹ ಫಲಾನುಭವಿಗಳನ್ನು ಗ್ರಾಮಸಭೆಗಳಲ್ಲಿ ಆನ್‌ಲೈನ್ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರೂ ಪಟ್ಟಿಯಿಂದ ಹೊರಗುಳಿಯದಂತೆ ಖಚಿತಪಡಿಸಿಕೊಳ್ಳಲು ಸೂಚನೆ ನೀಡಲಾಗಿದ್ದು, ಮೇ 15ರವರೆಗೆ ಮಾತ್ರ ಹೊಸ ಸೇರ್ಪಡೆಗೆ ಅವಕಾಶ ಇದೆ. ಆ ಬಳಿಕ ಯಾವುದೇ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಹಾಗೂ ಅಂತಿಮ ಪಟ್ಟಿಯನ್ನೇ ಮಾನ್ಯಗೊಳಿಸಲಾಗುತ್ತದೆ.
ಅರ್ಹ ಫಲಾನುಭವಿಗಳನ್ನು ಕೈಬಿಟ್ಟಿರುವುದು ಕಂಡುಬಂದರೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಪಿಡಿಒಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಈ ಕುರಿತು ಸಂಡೂರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಸಾರ್ವಜನಿಕರಿಗೆ ಮನವಿ ಮಾಡಿದ್ದು, “ವಸತಿ ಅಥವಾ ನಿವೇಶನ ಇಲ್ಲದೆ ಉಳಿದಿರುವವರು ತಕ್ಷಣ ತಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು. ಇದು ಕೊನೆಯ ಅವಕಾಶವಾಗಿದ್ದು, ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು,” ಎಂದು ತಿಳಿಸಿದ್ದಾರೆ.
ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗಿದ್ದು, ಸಾರ್ವಜನಿಕರು ವಿಳಂಬ ಮಾಡದೆ ಗ್ರಾಮ ಆಡಳಿತವನ್ನು ಸಂಪರ್ಕಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ವಸತಿ ಎಂಬುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಸರ್ಕಾರ ನೀಡಿರುವ ಈ ಕೊನೆಯ ಅವಕಾಶವನ್ನು ಯಾರೂ ಕೈ ತಪ್ಪಿಸಿಕೊಳ್ಳಬಾರದು. 2018ರ ಸಮೀಕ್ಷೆಯಲ್ಲಿ ಬಿಟ್ಟು ಹೋಗಿರುವ ಅರ್ಹ ಫಲಾನುಭವಿಗಳು ತಕ್ಷಣವೇ ತಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ನೋಂದಾಯಿಸಿಕೊಂಡು, ಯೋಜನೆಯ ಪ್ರಯೋಜನ ಪಡೆಯಬೇಕು.
–ಮಡಗಿನ ಬಸಪ್ಪ, ಕಾರ್ಯನಿರ್ವಾಹಕ ಅಧಿಕಾರಿಗಳು, ಸಂಡೂರು






