Ballari | ಹಣಕಾಸಿನ ವಿಚಾರಕ್ಕೆ ಸ್ನೇಹಿತನ ಕೊಲೆ: ಮೃತದೇಹ ಸುಟ್ಟು ನದಿಗೆ ಎಸೆದ ಆರೋಪ; ನಾಲ್ವರ ಬಂಧನ

ಮೃತ ಯುವಕ
ಬಳ್ಳಾರಿ: ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಸುಟ್ಟು ಮೂಳೆ ಹಾಗೂ ಬೂದಿಯನ್ನು ತುಂಗಭದ್ರಾ ನದಿಗೆ ಎಸೆದಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ತೆಕ್ಕಲಕೋಟೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ತೆಕ್ಕಲಕೋಟೆ ಪಟ್ಟಣದ 13ನೇ ವಾರ್ಡ್ ನಿವಾಸಿ ಎಸ್. ಹನುಮಂತಪ್ಪ (37) ಕೊಲೆಯಾದವರು.
ಅ.27ರಿಂದ ತಮ್ಮ ಪತಿ ಹನುಮಂತಪ್ಪ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಎಸ್. ಲಕ್ಷ್ಮಿ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಪತ್ನಿ ಅನುಮಾನ ವ್ಯಕ್ತಪಡಿಸಿ ಕೆಲವರ ಹೆಸರುಗಳನ್ನು ತಿಳಿಸಿದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಕೃತ್ಯದ ರಹಸ್ಯ ಬಯಲಾಗಿದ್ದು, ಹಣಕಾಸಿನ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸ್ನೇಹಿತರೇ ಹನುಮಂತಪ್ಪ ಅವರನ್ನು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಸುಟ್ಟು, ಮೂಳೆ ಹಾಗೂ ಬೂದಿಯನ್ನು ತುಂಗಭದ್ರಾ ನದಿಗೆ ಎಸೆದಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತೆಕ್ಕಲಕೋಟೆ ಪಟ್ಟಣದ 1ನೇ ವಾರ್ಡ್ ನಿವಾಸಿಗಳಾದ ಉಪೇಂದ್ರ ಅಲಿಯಾಸ್ ಹುಚ್ಚಪ್ಪ (27), ಶಶಿಕುಮಾರ ಗೌರವ (30), ಮಲ್ಲಿಕಾರ್ಜುನ (22) ಹಾಗೂ ಗಂಗಾಧರ (22) ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಪಿಐ ಚಂದನ್ ಗೋಪಾಲ್ ತಿಳಿಸಿದ್ದಾರೆ.
ಠಾಣೆ ಎದುರು ಕುಟುಂಬಸ್ಥರ ಧರಣಿ :
ಹನುಮಂತಪ್ಪ ಅವರ ಮೃತದೇಹ ಅಥವಾ ಕನಿಷ್ಠ ದೇಹದ ಅವಶೇಷಗಳಾದ ಮೂಳೆ ಮತ್ತು ಬೂದಿಯನ್ನಾದರೂ ಪತ್ತೆಹಚ್ಚಿ ಕುಟುಂಬಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿ, ಅವರ ಪತ್ನಿ ಹಾಗೂ ಮಕ್ಕಳು ರವಿವಾರ ರಾತ್ರಿ ತೆಕ್ಕಲಕೋಟೆ ಪೊಲೀಸ್ ಠಾಣೆ ಎದುರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.






