Ballari | ಗಣೇಶ ಮಹೋತ್ಸವ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಬಳ್ಳಾರಿ/ಕಂಪ್ಲಿ : ಆಧುನಿಕ ಜೀವನದ ಜಂಜಾಟದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಕಲ್ಮಠದ ಅಭಿನವ ಪ್ರಭುಸ್ವಾಮಿ ಹೇಳಿದರು.
ಪಟ್ಟಣದ ಭಾರತ್ ಚಿತ್ರಮಂದಿರದ ಬಳಿಯಿರುವ ಕೂಲಿಕಟ್ಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದೂ ಯುವ ಸೇನೆ ಹಾಗೂ ಜೆಸಿಐ ಕಂಪ್ಲಿ ಸೋನಾ ಸಹಯೋಗದಲ್ಲಿ ಮಹಾರಾಜ ಗಣಪತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಆರೋಗ್ಯವೇ ಮಹಾಭಾಗ್ಯ” ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಹಿಂದೂ ಯುವ ಸೇನೆ ಅಧ್ಯಕ್ಷ ಶಿವಕುಮಾರ್ ಅಲಬನೂರು ಮಾತನಾಡಿ, ಗಣೇಶೋತ್ಸವದ ಅಂಗವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ 250ಕ್ಕೂ ಹೆಚ್ಚು ಜನರು ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿಗಳ ಸದುಪಯೋಗ ಪಡೆದಿದ್ದಾರೆ ಎಂದು ತಿಳಿಸಿದರು.
ಶಿಬಿರ ಆರಂಭಕ್ಕೂ ಮುನ್ನ ಗಣಪತಿ ಪ್ರತಿಷ್ಠಾಪನಾ ಸ್ಥಳದಲ್ಲಿ ವಿಶೇಷ ಪೂಜೆ ಮತ್ತು ಪುನಸ್ಕಾರಗಳು ನೆರವೇರಿದವು.
ಜೆಸಿಐ ಕಂಪ್ಲಿ ಸೋನಾ ಅಧ್ಯಕ್ಷ ಡಾ. ಭರತ್ ಪದ್ಮಶಾಲಿ, ಡಾ. ಶ್ರದ್ಧಾ ಭರತ್, ಡಾ. ವಿಕ್ರಮ್ ರೈಕರ್, ಡಾ. ಪ್ರವೀಣ್ ಹಾಗೂ ಡಾ. ತಸ್ನೀಮ್ ನೇತೃತ್ವದ ವೈದ್ಯರ ತಂಡ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿತು.
ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮಗುರುಗಳಾದ ಸೈಯದ್ ಷಾ ಮೆಹಮೂದ್ ಖಾದ್ರಿ (ರೈಸ್ ಸಾಹೇಬ್), ಡಾ. ನೂರ್ ಅಹ್ಮದ್ ಖಾದ್ರಿ ಸೇರಿದಂತೆ ವಿವಿಧ ಸಮುದಾಯಗಳ ಗಣ್ಯರು ಭಾಗವಹಿಸಿ ಸೌಹಾರ್ದತೆಯ ಸಂದೇಶ ಸಾರಿದರು.
ಆರೋಗ್ಯ ಶಿಬಿರದ ಯಶಸ್ವಿ ಸಮಾರೋಪದ ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಮಹಾವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ, ಮುಖಂಡರಾದ ಎಂ. ಸುಧೀರ್, ಎನ್.ಎಂ. ಪತ್ರಯ್ಯಸ್ವಾಮಿ, ಎಂ. ಇಸ್ಮಾಯಿಲ್ ಬೇಗ್, ಅಕ್ಕಿ ಜಿಲಾನ್ ಹಾಗೂ ಹಿಂದೂ ಯುವ ಸೇನೆಯ ಪದಾಧಿಕಾರಿಗಳಾದ ನವೀನ್ ಅಲಬನೂರು, ಸಂತೋಷ್ ಅಲಬನೂರು, ಅವಿನಾಶ್ ಅಲಬನೂರು, ಚೇತನ್ ಆಚಾರ್, ಪ್ರದೀಪ್, ಅಮರೇಗೌಡ ಪಾಟೀಲ್, ಕಾರ್ತಿಕ, ರಾಕೇಶ್, ಹರ್ಷ, ಪುಟ್ಟಿ ರಾಘವೇಂದ್ರ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.






