Ballari | ಮೆಟ್ರಿ ಗ್ರಾಮದಲ್ಲಿ 10 ಜೋಡಿ ಉಚಿತ ಸಾಮೂಹಿಕ ವಿವಾಹ

ಬಳ್ಳಾರಿ/ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದ ಶ್ರೀ ಅಂಬಾದೇವಿ ಹಾಗೂ ಶ್ರೀ ನಾಗಲಿಂಪ್ಪ ತಾತ ಸುಕ್ಷೇತ್ರ ಧರ್ಮಮಠದಲ್ಲಿ ದೇವಸ್ಥಾನದ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ 10 ಜೋಡಿ ನವ ವಧು-ವರರು ಹೊಸ ಜೀವನಕ್ಕೆ ಕಾಲಿಟ್ಟರು.
ನಾಗಲಿಂಗಪ್ಪ ತಾತ ಮಠದ ಶ್ರೀ ಕುಮಾರ ತಾತನವರ ದಿವ್ಯ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹಗಳು ನೆರವೇರಿದವು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಮಾತನಾಡಿ, ಆಧುನಿಕ ಕಾಲದಲ್ಲಿ ಬಡ ಕುಟುಂಬಗಳ ಆರ್ಥಿಕ ಸಂಕಷ್ಟ ಹೆಚ್ಚಾಗಿದ್ದು, ಉಚಿತ ಸಾಮೂಹಿಕ ವಿವಾಹಗಳ ಮೂಲಕ ಬಡವರಿಗೆ ಕಂಕಣ ಭಾಗ್ಯ ಕಲ್ಪಿಸುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಸಾಮೂಹಿಕ ವಿವಾಹದಿಂದ ಬಡ ಕುಟುಂಬಗಳು ಮದುವೆಯ ಆರ್ಥಿಕ ಹೊರೆಯಿಂದ ಮುಕ್ತವಾಗಿ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ನವ ವಧು-ವರರು ಅನ್ಯೋನ್ಯತೆ ಹಾಗೂ ಸಹಬಾಳ್ವೆಯಿಂದ ಜೀವನ ನಡೆಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಬಡತನವನ್ನು ದೂರ ಮಾಡಬೇಕು ಎಂದು ಸಲಹೆ ನೀಡಿದರು.
ನಾಗಲಿಂಗಪ್ಪ ತಾತನ ಸುಕ್ಷೇತ್ರಕ್ಕೆ ಬಳ್ಳಾರಿ, ಕೊಪ್ಪಳ, ವಿಜಯನಗರ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ಮಠವೂ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಂಬಾರ್ ರಾಜಪ್ಪ, ಹೆಚ್. ಗಂಗಾಧರ ಮೆಟ್ರಿ, ನಾಗೇಂದ್ರಪ್ಪ, ನೆಣಕಿ ಗಿರೀಶ, ಹೆಚ್. ಕುಮಾರ, ಉಪ್ಪಾರಹಳ್ಳಿ ಕೊಂಡಪ್ಪ, ಕೆ. ನಾಗಲಿಂಗ, ಪಂಪಾಪತಿ, ಗಾದಿಲಿಂಗ, ಎ. ದೊಡ್ಡನಗೌಡ ಸೇರಿದಂತೆ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.
ನಂತರ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.






