ಬಳ್ಳಾರಿ ಗುಂಪು ಘರ್ಷಣೆ | ನಾನು ಯಾರಿಗೂ ಬೆದರಿಕೆ ಹಾಕಿಲ್ಲ : ಶಾಸಕ ನಾರಾ ಭರತ್ ರೆಡ್ಡಿ ಸ್ಪಷ್ಟನೆ

ನಾರಾ ಭರತ್ ರೆಡ್ಡಿ
ಬಳ್ಳಾರಿ : ನಾನು ನನ್ನ ಕುಟುಂಬ ಸಮೇತ ಹೊಸ ವರ್ಷ ಆಚರಣೆಗಾಗಿ ಹೊಸಪೇಟೆಗೆ ಹೋಗಿದ್ದೆ. ಆದರೆ, ಗುರುವಾರ ಸಂಜೆ ಬ್ಯಾನರ್ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಸಂಘರ್ಷ ಹಾಗೂ ಗಲಾಟೆ ನಡೆದ ವಿಷಯ ತಿಳಿದ ತಕ್ಷಣ ಕೂಡಲೇ ಕುಟುಂಬವನ್ನು ಅಲ್ಲಿಯೇ ಬಿಟ್ಟು, ನಾನು ಹೊಸಪೇಟೆಯಿಂದ ಬಳ್ಳಾರಿಗೆ ಮರಳಿ ಘಟನಾ ಸ್ಥಳಕ್ಕೆ ಆಗಮಿಸಿ ನಮ್ಮ ಕಾರ್ಯಕರ್ತರನ್ನು ಸಮಾಧಾನಪಡಿಸುತ್ತಿದ್ದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಗಾಲಿ ಜನಾರ್ಧನ್ ರೆಡ್ಡಿ ಬೆಂಬಲಿಗರಿಂದ ಕಲ್ಲುತೂರಾಟ ನಡೆದಿದೆ. ಆದರೆ ನಾನು ಅವನ ಮನೆ ಸುಟ್ಟುಹಾಕುತ್ತೇನೆ ಎಂದು ಹೇಳಿಲ್ಲ. ನಾನು ಹೇಳಿದ್ದು, ನನ್ನ ಕಾರ್ಯಕರ್ತರನ್ನು ಸಮಾಧಾನಪಡಿಸದೇ ಇದ್ದರೆ ಇವತ್ತು ಅವನ ಮನೆ ಸುಟ್ಟು ಹೋಗುತ್ತಿತ್ತು ಎಂಬ ಅರ್ಥದಲ್ಲಿ ಹೇಳಿದ್ದೆ. ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಆದರೆ ಮಾಧ್ಯಮದವರು ಆ ಹೇಳಿಕೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸದೆ, ತಪ್ಪಾಗಿ ಪ್ರದರ್ಶಿಸಿದ್ದಾರೆ ಎಂದು ಅವರು ಆರೋಪಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರತ್ ರೆಡ್ಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಪ್ರಚಾರವೂ ನಡೆದಿದ್ದು, ಅದು ಸತ್ಯವಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಮ್ಮ ನಾಯಕರು ನನಗೆ ಯಾವುದೇ ರೀತಿಯ ಕೋಪ ವ್ಯಕ್ತಪಡಿಸಿಲ್ಲ. ನಡೆದ ಘಟನೆಯ ಕುರಿತು ಮಾಹಿತಿ ಕೇಳಿದ್ದು, ಅದನ್ನು ನಾನು ಸ್ಪಷ್ಟವಾಗಿ ವಿವರಿಸಿದ್ದೇನೆ. ಘಟನೆಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ಒಂದು ತಂಡವನ್ನು ಕಳುಹಿಸಲಾಗುವುದು ಎಂಬ ಮಾಹಿತಿ ಅವರು ನೀಡಿದ್ದಾರೆ ಎಂದು ಭರತ್ ರೆಡ್ಡಿ ಹೇಳಿದರು.
ಮಾಧ್ಯಮಗಳು ಸತ್ಯ ಮತ್ತು ವಾಸ್ತವಾಂಶಗಳನ್ನು ಜನರಿಗೆ ತಲುಪಿಸಬೇಕು. ಅಸಂಪೂರ್ಣ ಅಥವಾ ತಪ್ಪು ಅರ್ಥ ನೀಡುವ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಬಾರದು ಎಂದು ಅವರು ಮಾಧ್ಯಮದವರಲ್ಲಿ ಮನವಿ ಮಾಡಿದರು.







