ಬಳ್ಳಾರಿ ಗುಂಪು ಘರ್ಷಣೆ | ಮೃತ ರಾಜಶೇಖರ್ ನಿವಾಸಕ್ಕೆ ಸಚಿವ ಝಮೀರ್ ಅಹ್ಮದ್ ಭೇಟಿ

ಬಳ್ಳಾರಿ: ಬ್ಯಾನರ್ ವಿವಾದಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ್ ರೆಡ್ಡಿ ಅವರ ನಿವಾಸಕ್ಕೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಅವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರು ಮೃತ ರಾಜಶೇಖರ್ ಕುಟುಂಬಕ್ಕೆ 25 ಲಕ್ಷ ರೂ. ಧನಸಹಾಯ ನೀಡಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಮಹರ್ಷಿಯವರ ದೊಡ್ಡ ಮಟ್ಟದ ಪುತ್ಥಳಿ ನಿರ್ಮಿಸಬೇಕೆಂಬ ಕನಸು ಬಹಳ ವರ್ಷಗಳಿಂದ ಇತ್ತು. ಆದರೆ ಇಂತಹ ಪವಿತ್ರ ಉದ್ದೇಶಕ್ಕಾಗಿ ನಡೆದ ಕಾರ್ಯಕ್ರಮದಲ್ಲಿ ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದಂತೆ ಒಬ್ಬ ಯುವಕನ ಜೀವ ಹೋದದ್ದು ಅತ್ಯಂತ ವಿಷಾದಕರ ಸಂಗತಿ. ಇಂತಹ ಘಟನೆ ನಡೆಯಬಾರದಾಗಿತ್ತು ಎಂದು ಸಚಿವರು ಹೇಳಿದರು.
ಜನರ ಆಶಯದಂತೆ ಭರತ್ ರೆಡ್ಡಿ ಅವರು ಒಳ್ಳೆಯ ಕೆಲಸಕ್ಕೆ ಮುಂದಾಗಿದ್ದರು. ಆದರೆ ಬ್ಯಾನರ್ ವಿಚಾರದಲ್ಲಿ ಉಂಟಾದ ಗಲಾಟೆ ರಾಜಶೇಖರ್ ಎಂಬ ಯುವಕನ ಸಾವಿಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ದೊಡ್ಡ ಕಾರ್ಯಕ್ರಮಗಳ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು ಎಂದು ಅವರು ಹೇಳಿದರು.
ಎಸ್ಪಿ ಆತ್ಮಹತ್ನೆ ಯತ್ನ ಎಂಬುದು ಸುಳ್ಳು ಸುದ್ದಿ:
ಇದೇ ವೇಳೆ ಎಸ್‌ಪಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು. ನಾನು ಸ್ವತಃ ಅವರೊಂದಿಗೆ ಮಾತನಾಡಿದ್ದೇನೆ. ಆ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದು ಭರತ್ ರೆಡ್ಡಿ ಅವರ ಮನೆ ಕಾರ್ಯಕ್ರಮವೂ ಅಲ್ಲ, ಗೃಹಪ್ರವೇಶವೂ ಅಲ್ಲ. ವಾಲ್ಮೀಕಿ ಮಹರ್ಷಿಯಂತಹ ಮಹಾನ್ ವ್ಯಕ್ತಿಯ ಪುತ್ಥಳಿ ನಿರ್ಮಾಣ ಜನಸಾಮಾನ್ಯರ ಕನಸಾಗಿತ್ತು. ಭರತ್ ರೆಡ್ಡಿ ಅವರು ಚಿಕ್ಕ ವಯಸ್ಸಿನಲ್ಲೇ ಇಷ್ಟು ದೊಡ್ಡ ಜವಾಬ್ದಾರಿಯನ್ನು ಹೊತ್ತು ಜನರ ಆಸೆ ನೆರವೇರಿಸಲು ಮುಂದಾಗಿದ್ದರು. ಇಂತಹ ಕಾರ್ಯಕ್ಕೆ ಬೆಂಬಲ ನೀಡಬೇಕಾಗಿತ್ತು ಎಂದು ಹೇಳಿದರು.
ಘಟನೆಯ ಕುರಿತು ಪೊಲೀಸ್ ತನಿಖೆ ಮುಂದುವರಿದಿದ್ದು, ತಪ್ಪಿತಸ್ಥರು ಯಾರು ಎಂಬುದು ಪತ್ತೆಯಾದ ಬಳಿಕ ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.







