Ballari | ‘ಗುರುರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ

ಬಳ್ಳಾರಿ/ಕಂಪ್ಲಿ: ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಸಾಧನೆ ಮಾಡಿದ ಶಿಕ್ಷಕರಿಗೆ ನೀಡಲಾಗುವ ‘ಗುರುರತ್ನ’ ಪ್ರಶಸ್ತಿಯು ಶಿಕ್ಷಕರ ಪರಿಶ್ರಮವನ್ನು ಗುರುತಿಸುವ ವಿಶೇಷ ಗೌರವವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಂಪ್ಲಿ ತಾಲೂಕು ಅಧ್ಯಕ್ಷ ಹನುಮಂತಪ್ಪ ಹೇಳಿದರು.
ಬಳ್ಳಾರಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಇತ್ತೀಚೆಗೆ ನಡೆದ ಗುರುರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಂಪ್ಲಿ ತಾಲೂಕಿನ ನಾಲ್ವರು ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ ಬಳಿಕ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರು ಯಾವುದೇ ಫಲಾಪೇಕ್ಷೆಯಿಲ್ಲದೆ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಾಗ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸಮಾರಂಭದಲ್ಲಿ ಕಂಪ್ಲಿ ತಾಲೂಕಿನ ನಂ.10 ಮುದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಪ್ರಭುಕ್ಯಾಂಪ್ ಸರ್ಕಾರಿ ಶಾಲೆಯ ಪ್ರಭಾರಿ ಮುಖ್ಯಗುರು ಪಿ. ವೀರಕುಮಾರ, ಮೆಟ್ರಿ ಶಿವಪುರ ಶಾಲೆಯ ಬಡ್ತಿ ಮುಖ್ಯಗುರು ರಾಮಚಂದ್ರಪ್ಪ, ಕಂಪ್ಲಿ ಪಟ್ಟಣದ ಎಂ.ಡಿ.ಕ್ಯಾಂಪ್ ಶಾಲೆಯ ಬಡ್ತಿ ಮುಖ್ಯಶಿಕ್ಷಕಿ ಅಗಳಿ ನಾಗರತ್ನ ಹಾಗೂ ಹಂಪಾದೇವನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜೀರಿಗನೂರು ಶಾಲೆಯ ಸಹ ಶಿಕ್ಷಕ ಕೆ. ವಿರೇಶ ಅವರು ಗುರುರತ್ನ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ವೆಂಕಟೇಶ ಪ್ರಸಾದ್, ಮೇಯರ್ ಪಿ. ಗಾದೆಪ್ಪ, ಉಪ ಮೇಯರ್ ಮುಬಿನಾಬೀ, ಮಾಜಿ ಬುಡಾ ಅಧ್ಯಕ್ಷ ಉಮಯಾನ್‌ಖಾನ್, ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ, ಉಪಾಧ್ಯಕ್ಷ ಮಾರುತೇಶ, ಪ್ರಧಾನ ಕಾರ್ಯದರ್ಶಿ ಚೇತನ್, ಸಂಘಟನಾ ಕಾರ್ಯದರ್ಶಿ ಸುಂದರೇಶ, ಬಳ್ಳಾರಿ ಜಿಲ್ಲಾಧ್ಯಕ್ಷ ಸಿ. ನಿಂಗಪ್ಪ, ಪ್ರಧಾನ ಕಾರ್ಯದರ್ಶಿ ಗುಂಡಪ್ಪನವರ್ ನಾಗರಾಜ, ಸರ್ಕಾರಿ ನೌಕರರ ಸಂಘದ ಕಂಪ್ಲಿ ತಾಲೂಕು ಅಧ್ಯಕ್ಷ ಹೆಚ್. ದೊಡ್ಡಬಸಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.






