Ballari | ಆಶ್ರಯ ಯೋಜನೆಯಡಿ 47 ಫಲಾನುಭವಿಗಳಿಗೆ ಮನೆ ಹಸ್ತಾಂತರ

ಸಂಡೂರು (ಬಳ್ಳಾರಿ): ಪಟ್ಟಣದ ಟೌನ್ಹಾಲ್ ಸಮೀಪ ‘ಆಶ್ರಯ’ ಯೋಜನೆಯಡಿ ನಿರ್ಮಿಸಲಾಗಿರುವ ಜಿ+1 ಮಾದರಿಯ ವಸತಿ ಸಮುಚ್ಚಯದ ಮೊದಲ ಹಂತದ ಮನೆಗಳನ್ನು ಶುಕ್ರವಾರ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ಸಂಸದ ಈ.ತುಕಾರಾಂ ಹಾಗೂ ಶಾಸಕಿ ಅನ್ನಪೂರ್ಣ ಅವರು ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ವಿತರಿಸಿ, ಮನೆಗಳ ಬೀಗದ ಕೀಲಿ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಶಾಸಕಿ ಅನ್ನಪೂರ್ಣ, ಬಡ ಹಾಗೂ ನಿವೇಶನ ರಹಿತ ಕುಟುಂಬಗಳ ಸ್ವಂತ ಮನೆಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಶ್ರಮಿಸುತ್ತಿದ್ದಾರೆ ಎಂದರು.
ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗೂ ಆಶ್ರಯ ಯೋಜನೆಯಡಿ ಜಿ+2 ಮಾದರಿಯಲ್ಲಿ ಒಟ್ಟು 1,530 ಮನೆಗಳನ್ನು ನಿರ್ಮಿಸುವ ಬೃಹತ್ ಯೋಜನೆ ರೂಪಿಸಲಾಗಿದೆ. ಈ ಪೈಕಿ ತಮ್ಮ ಪಾಲಿನ ವಂತಿಕೆಯನ್ನು ಪಾವತಿಸಿದ 47 ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿನಯ್ ಕುಮಾರ್ ಗೌಡ, ಪುರಸಭೆಯ ಸಿಬ್ಬಂದಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.




