Ballari | ಕಳ್ಳಭಟ್ಟಿ ಸಾರಾಯಿ ಸಮಾಜಕ್ಕೆ ಮಾರಕ : ತಹಶೀಲ್ದಾರ್ ಜೂಗಲ್ ಮಂಜುನಾಯಕ

ಬಳ್ಳಾರಿ / ಕಂಪ್ಲಿ: ಕಳ್ಳಭಟ್ಟಿ ಸಾರಾಯಿ ಮಾರಾಟ ಕಾನೂನುಬಾಹಿರವಾಗಿದ್ದು, ಸಮಾಜಕ್ಕೆ ಅತ್ಯಂತ ಮಾರಕವಾಗಿದೆ ಎಂದು ಜೂಗಲ್ ಮಂಜುನಾಯಕ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕಳ್ಳಭಟ್ಟಿ ನಿರ್ಮೂಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಟ್ಟಣದ ಶಿಕಾರಿಹಟ್ಟಿಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಮತ್ತು ಮಾರಾಟ ನಡೆಯುತ್ತಿರುವ ಮಾಹಿತಿ ಲಭ್ಯವಾಗಿದ್ದು, ಇದನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಶಿಕಾರಿಹಟ್ಟಿಯಲ್ಲಿರುವ ಅನಧಿಕೃತ ಮನೆಗಳ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಅಬಕಾರಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ತಾಲೂಕಿನಲ್ಲಿ ಕಳ್ಳಭಟ್ಟಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಗ್ರಾಮೀಣ ಭಾಗಗಳಲ್ಲಿ ಗಸ್ತು ಹೆಚ್ಚಿಸಿ ಹೆಚ್ಚಿನ ನಿಗಾವಹಿಸಬೇಕು ಎಂದು ಸೂಚಿಸಿದರು.
ಮುಂದಿನ ದಿನಗಳಲ್ಲಿ ಕಳ್ಳಭಟ್ಟಿ ಸಾರಾಯಿಯಿಂದಾಗುವ ಅನಾಹುತಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಈ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುವುದು ಎಂದರು.
ಈ ವೇಳೆ ಉಷಾ ಮಾತನಾಡಿ, 2025ರ ಜುಲೈಯಿಂದ 2026ರ ಏಪ್ರಿಲ್‌ವರೆಗೆ ಒಟ್ಟು ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ಈ ಅವಧಿಯಲ್ಲಿ 33.77 ಲೀಟರ್ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿದ್ದು, 10 ಲೀಟರ್ ಬೆಲ್ಲದ ಕೊಳೆಯನ್ನು ನಾಶಪಡಿಸಲಾಗಿದೆ. ಒಂದು ದ್ವಿಚಕ್ರ ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಬಿ. ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಾದ ಶ್ರೀಶೈಲಗೌಡ, ಪಿ. ಬಸವರಾಜ, ಬಸವರಾಜ, ವಿರೇಶ ಮಹಾಶೆಟ್ಟಿ, ನಾಗಮುನಿಸ್ವಾಮಿ ಹಾಗೂ ರಾಮಾಂಜಿನೀಯಲು ಉಪಸ್ಥಿತರಿದ್ದರು.






