Ballari | ‘ವಾರ್ತಾಭಾರತಿ’ ವರದಿ ಫಲಶ್ರುತಿ : ಬಂಡ್ರಿ ಸಾರ್ವಜನಿಕ ಶೌಚಾಲಯ ಮತ್ತೆ ಸಾರ್ವಜನಿಕರ ಬಳಕೆಗೆ ಮುಕ್ತ

ಸಂಡೂರು/ಬಳ್ಳಾರಿ: ತಾಲೂಕಿನ ಬಂಡ್ರಿ ಗ್ರಾಮದಲ್ಲಿ 29.19 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದರೂ ಹಲವು ವರ್ಷಗಳಿಂದ ನಿರ್ವಹಣೆಯ ಕೊರತೆಯಿಂದ ಬಂದ್ ಆಗಿದ್ದ ಸಾರ್ವಜನಿಕ ಶೌಚಾಲಯದ ದುಸ್ಥಿತಿಯನ್ನು ‘ವಾರ್ತಾಭಾರತಿ’ ಪ್ರಮುಖವಾಗಿ ವರದಿ ಮಾಡುತ್ತಿದ್ದಂತೆಯೇ ತಾಲೂಕು ಆಡಳಿತ ಎಚ್ಚೆತ್ತುಕೊಂಡು ತ್ವರಿತ ಕ್ರಮ ಕೈಗೊಂಡಿದೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುಡಗಿನ ಬಸಪ್ಪ ಅವರು ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಯೋಗ್ಯವಾಗುವಂತೆ ಸ್ವಚ್ಛಗೊಳಿಸಿ, ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ತಕ್ಷಣವೇ ಕಾರ್ಯಾರಂಭಗೊಳಿಸುವಂತೆ ಆದೇಶಿಸಿದರು.
ಅಧಿಕಾರಿಗಳ ನಿರ್ದೇಶನದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ತ್ವರಿತವಾಗಿ ಕಾರ್ಯನಿರ್ವಹಿಸಿ, ಶೌಚಾಲಯವನ್ನು ಸ್ವಚ್ಛಗೊಳಿಸಿ ಮತ್ತೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದ್ದಾರೆ.
ಬಂಡ್ರಿ ಗ್ರಾಮದ ಬಸ್ ನಿಲ್ದಾಣದ ಸಮೀಪದಲ್ಲಿರುವ ಈ ಶೌಚಾಲಯ ಇದೀಗ ಸಾರ್ವಜನಿಕರಿಗೆ ಲಭ್ಯವಾಗಿದ್ದು, ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು, ವ್ಯಾಪಾರಸ್ಥರು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಿದೆ. ವಿಶೇಷವಾಗಿ ಪ್ರತಿ ಬುಧವಾರ ನಡೆಯುವ ವಾರದ ಸಂತೆಗೆ ಆಗಮಿಸುವ ಸಾವಿರಾರು ಜನರಿಗೆ, ಅದರಲ್ಲೂ ಮಹಿಳೆಯರಿಗೆ ಈ ಸೌಲಭ್ಯ ಹೆಚ್ಚಿನ ನೆರವಾಗಲಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಕೈಗೊಂಡ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುಡಗಿನ ಬಸಪ್ಪ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಕಟವಾದ ‘ವಾರ್ತಾಭಾರತಿ’ ವರದಿಗೆ ಸ್ಪಂದಿಸಿ ಸಮಸ್ಯೆಗೆ ಶೀಘ್ರ ಪರಿಹಾರ ದೊರೆತಿರುವುದು ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.






