ಬಳ್ಳಾರಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಠಾವಧಿ ಮುಷ್ಕರ

ಬಳ್ಳಾರಿ / ಕಂಪ್ಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪತ್ರ ಬರಹಗಾರರ ಒಕ್ಕೂಟದ ವತಿಯಿಂದ ಮಂಗಳವಾರ ಪಟ್ಟಣದ ಪುರಸಭೆ ಎದುರುಗಡೆಯಲ್ಲಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹಿರಿಯ ಉಪನೋಂದಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಅನಿರ್ಧಿಷ್ಠಾವಧಿ ಮುಷ್ಕರ ನಡೆಸಲಾಯಿತು. ಬಳಿಕ ಉಪನೋಂದಣಾಧಿಕಾರಿ ಎಸ್.ಬಿ. ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಂತರ ಹಿರಿಯ ಪತ್ರ ಬರಹಗಾರ ಕೆ.ಮೆಹಬೂಬ್ ಮಾತನಾಡಿ, ಕಾವೇರಿ–2 ತಂತ್ರಾಂಶದಲ್ಲಿ ನಡೆದ ಕೆಲ ಬದಲಾವಣೆಗಳಿಂದ ಎಲ್ಲಾ ಉಪನೋಂದಣಿ ಕಚೇರಿಗಳಲ್ಲಿ ನೋಂದಣಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಹೇಳಿದರು.
ಸ್ವತ್ತಿನ ವಿವರಣೆಯ ಮೂಲ ಕರಡುಪ್ರತಿಯಲ್ಲಿ ಇರುವ ಅಂಶಗಳು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಮೂದಾಗದೇ ಇರುವ ಕಾರಣ ಶೇ.95ರಷ್ಟು ದಾಖಲೆಗಳು ನೋಂದಣಿ ಹಂತದಲ್ಲೇ ಸ್ಥಗಿತಗೊಳ್ಳುತ್ತಿವೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಂತ್ರಾಂಶದ ದೋಷಗಳನ್ನು ತಕ್ಷಣ ಸರಿಪಡಿಸಿ ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು. ಪರವಾನಿಗೆ ಪಡೆದ ಭೂಮಾಪಕರಿಗೆ ನೀಡಿರುವಂತೆ ಅಧಿಕೃತ ಪತ್ರ ಬರಹಗಾರರಿಗೂ ಸಿಟಿಜನ್ ಲಾಗಿನ್ ಜೊತೆಗೆ ಪ್ರತ್ಯೇಕ ಲಾಗಿನ್ ಐಡಿ ನೀಡಬೇಕು. ಅನಧಿಕೃತ ಬರಹಗಾರರ ಹಾವಳಿಗೆ ತಡೆ ನೀಡುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಸೇವಾ ಭದ್ರತೆ ಒದಗಿಸಿ ಲಾಗಿನ್ ಐಡಿ ಅಥವಾ ಗುರುತಿನ ಚೀಟಿ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್. ಶರ್ಮಸ್‌ವಲಿ, ಆರ್. ಚನ್ನಬಸವ, ಜಿ.ಮಹೇಶ್, ಎ.ಸತ್ಯನಾರಾಯಣಮೂರ್ತಿ, ಎಸ್.ಮಹಮ್ಮದ್ ಆಶಂ, ಡಿ.ಮಂಜುನಾಥ, ಎಚ್.ರಾಜಶೇಖರ, ವಿ.ಅನಂತಪದ್ಮನಾಥ, ಕೆ.ವಿ.ಸಂದೀಪ, ಸಿದ್ದರಾಮಯ್ಯ ಸೇರಿದಂತೆ ಇತರರು ಇದ್ದರು.







