Ballari | ವಿಠಲಾಪುರದಲ್ಲಿ VB-G RAM G ಕಾಮಗಾರಿ ಪರಿಶೀಲನೆ

ಸಂಡೂರು/ಬಳ್ಳಾರಿ: ತಾಲೂಕಿನ ವಿಠಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ VB-G RAM G ಯೋಜನೆಯಡಿ ನಡೆಯುತ್ತಿರುವ ಸಮಗ್ರ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಉದ್ಯೋಗ ಖಾತರಿ ಯೋಜನೆಯಡಿ ನಿರಂತರವಾಗಿ ಕೆಲಸ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ದಿನಕ್ಕೆ ₹382 ಕೂಲಿ ಪಾವತಿಸಲಾಗುತ್ತಿದ್ದು, ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ ಗರಿಷ್ಠ 125 ದಿನಗಳ ಉದ್ಯೋಗ ಒದಗಿಸುವ ಅವಕಾಶವಿದೆ. ಆದ್ದರಿಂದ ಗ್ರಾಮೀಣ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ಬೇರೆಡೆಗೆ ತೆರಳುವ ಅಗತ್ಯವಿಲ್ಲ. ಸ್ಥಳೀಯವಾಗಿಯೇ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಡಗಿನ ಬಸಪ್ಪ ತಿಳಿಸಿದರು.
ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ ಅವರು, ನಿಗದಿತ ಅಳತೆ ಹಾಗೂ ತಾಂತ್ರಿಕ ಮಾನದಂಡಗಳಿಗೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಬೇಕು. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಹಾಗೂ ಕಾರ್ಮಿಕರಿಗೆ ಸಮರ್ಪಕವಾಗಿ ಕೆಲಸ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಜಲಸಂರಕ್ಷಣೆ, ಕೆರೆಗಳ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಇಂತಹ ಕಾಮಗಾರಿಗಳು ಪ್ರಮುಖವಾಗಿವೆ. ಇದರಿಂದ ಗ್ರಾಮದ ಜಲಮೂಲಗಳು ಸುಧಾರಿಸುವುದರ ಜೊತೆಗೆ ಸ್ಥಳೀಯ ಕಾರ್ಮಿಕರಿಗೆ ಆದಾಯದ ಮೂಲವೂ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ವಸಂತರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ, ಕಾರ್ಯದರ್ಶಿ ಹುಚ್ಚಪ್ಪ, ಬಿಎಫ್‌ಟಿ ಹಾಗೂ ಗ್ರಾಮ ಕಾಯಕ ಮಿತ್ರರು ಉಪಸ್ಥಿತರಿದ್ದರು.






