Ballari | ವಾರ್ತಾ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕಾರ

ಬಳ್ಳಾರಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಹಾಗೂ ಡಿಐಜಿ ಎಂ.ಎನ್. ಅನುಚೇತ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ಇದುವರೆಗೆ ಇಲಾಖೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಎಡಿಜಿಪಿ ಹೇಮಂತ್ ಎಂ. ನಿಂಬಾಳ್ಕರ್ ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ನೂತನ ಆಯುಕ್ತರಿಗೆ ಶುಭ ಕೋರಿದರು.
ಸರ್ಕಾರವು ಎಂ.ಎನ್. ಅನುಚೇತ್ ಅವರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜೊತೆಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಹೆಚ್ಚುವರಿ ಪ್ರಭಾರವನ್ನೂ ವಹಿಸಿದೆ.
ಮೂಲತಃ ಕೋಲಾರ ಜಿಲ್ಲೆಯವರಾದ ಎಂ.ಎನ್. ಅನುಚೇತ್ ಅವರು ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 2006ರಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ತಾಂತ್ರಿಕ ಹಿನ್ನೆಲೆ ಹೊಂದಿರುವ ಅವರು ನಾಗರಿಕ ಸೇವೆಗೆ ಸೇರುವ ಉದ್ದೇಶದಿಂದ ಶ್ರಮಿಸಿ, 2008ರ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ, 2009ರ ಬ್ಯಾಚ್‌ನ ಕರ್ನಾಟಕ ವೃಂದದ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು.
ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ ಹಾಗೂ ಸಮರ್ಥ ಆಡಳಿತಕ್ಕಾಗಿ ಹೆಸರಾಗಿರುವ ಅನುಚೇತ್ ಅವರು, ವಾರ್ತಾ ಇಲಾಖೆಯ ಕಾರ್ಯವೈಖರಿಗೆ ಹೊಸ ಚೈತನ್ಯ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಕೈಗೊಂಡ ವಿವಿಧ ಅತ್ಯುತ್ತಮ ತನಿಖಾ ಕಾರ್ಯಗಳನ್ನು ಗುರುತಿಸಿ ಕೇಂದ್ರ ಸರ್ಕಾರವು ಪ್ರತಿಷ್ಠಿತ “ಕೇಂದ್ರ ಗೃಹ ಸಚಿವರ ಅತ್ಯುತ್ತಮ ತನಿಖಾ ಪದಕ” ನೀಡಿ ಗೌರವಿಸಿದೆ.
2011ರಲ್ಲಿ ಪುತ್ತೂರಿನ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ವೃತ್ತಿಜೀವನ ಆರಂಭಿಸಿದ ಅವರು, ಬಳಿಕ ಸಿಐಡಿ ವಿಭಾಗದ ಎಸ್ಪಿ, ಬೆಂಗಳೂರು ನಗರದ ಕೇಂದ್ರ ವಿಭಾಗದ ಡಿಸಿಪಿ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರು ನಗರದ ಜಂಟಿ ಪೊಲೀಸ್ ಆಯುಕ್ತ (ಸಂಚಾರ)ರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ಅವರು, ನಗರದ ಸಂಚಾರ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಅಳವಡಿಕೆಗೆ ಪ್ರಮುಖ ಪಾತ್ರವಹಿಸಿದ್ದರು. ಈ ಹುದ್ದೆಗೆ ಬರುವ ಮುನ್ನ ಅವರು ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ಸಂದರ್ಭದಲ್ಲಿ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ್, ಸಿದ್ದೇಶ್ವರಪ್ಪ ಜಿ.ಬಿ., ಸಿ.ಆರ್. ನವೀನ್, ಉಪನಿರ್ದೇಶಕರಾದ ಬಿ.ಕೆ. ರಾಮಲಿಂಗಪ್ಪ, ಶಫಿ ಸಾದುದ್ದೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






