Ballari | ವಿಠಲಾಪುರದಲ್ಲಿ ʼಜಾನಪದ ಚಿತ್ತ ಕಾಲೇಜಿನತ್ತʼ ಸಾಂಸ್ಕೃತಿಕ ಕಾರ್ಯಕ್ರಮ

ಸಂಡೂರು/ಬಳ್ಳಾರಿ: ಜಾನಪದ ಕಲೆ, ಸಂಸ್ಕೃತಿ ಹಾಗೂ ಗ್ರಾಮೀಣ ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಶ್ರೀ ಹಂಪಿ ವಿರೂಪಾಕ್ಷ ಬಯಲಾಟ ನಾಟಕ ಪ್ರೋತ್ಸಾಹ ಟ್ರಸ್ಟ್, ವಿಠಲಾಪುರ ವತಿಯಿಂದ ‘ಜಾನಪದ ಚಿತ್ತ ಕಾಲೇಜಿನತ್ತ’ ಎಂಬ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆ.14ರಂದು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಎಂ. ತಿರುಮಲ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಜಾನಪದ ಕಲೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಟ್ರಸ್ಟ್ ನಿರಂತರವಾಗಿ ಜನಪರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು. ಮುಂದಿನ ದಿನಗಳಲ್ಲಿ ಟ್ರಸ್ಟ್ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ಹಲವು ಮಹತ್ವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಯರ್ರಪ್ಪ ಡಿ. ಮಾತನಾಡಿ, ಜಾನಪದ ಕಲಾಪ್ರಕಾರಗಳು ಜನರ ಜೀವನಾನುಭವದಿಂದ ಹುಟ್ಟಿ, ತಲೆಮಾರುಗಳಿಂದ ಬಾಯಿಂದ ಬಾಯಿಗೆ ಹರಿದು ಬಂದಿರುವ ಅಮೂಲ್ಯ ಸಾಂಸ್ಕೃತಿಕ ಸಂಪತ್ತು. ಇಂತಹ ಕಲೆಗಳ ಪರಿಚಯ ವಿದ್ಯಾರ್ಥಿಗಳಲ್ಲಿ ನಮ್ಮ ನಾಡಿನ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುತ್ತದೆ ಎಂದರು.
ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಮಂಜುನಾಥ ಅವರು ‘ಜೀವನ ಮತ್ತು ಶಿಕ್ಷಣದಲ್ಲಿ ಜಾನಪದದ ಮಹತ್ವ’ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಜಾನಪದವು ಕೇವಲ ಮನರಂಜನೆಯಲ್ಲ; ಅದು ಜನಜೀವನದ ಅನುಭವ, ಜ್ಞಾನ, ನಂಬಿಕೆ, ಸಂಪ್ರದಾಯ ಹಾಗೂ ಸಾಮಾಜಿಕ ಮೌಲ್ಯಗಳ ಪ್ರತಿಬಿಂಬವಾಗಿದೆ ಎಂದು ವಿವರಿಸಿದರು.
ಜಾನಪದ ವಿಶ್ವವಿದ್ಯಾಲಯ, ಗೊಟಗುಡಿಯ ಸಿಂಡಿಕೇಟ್ ಸದಸ್ಯೆ ಡಾ. ಸಹನಾ ಸಿಂಜಾರ್ ಅವರು ಗ್ರಾಮೀಣ ಭಾಗದ ಜಾನಪದ ಹಾಗೂ ಜಾನಪದ ಕಲೆಯಲ್ಲಿ ಮಹಿಳೆಯರ ಸ್ಥಾನಮಾನ ಕುರಿತು ಮಾತನಾಡಿದರು.
ಹವ್ಯಾಸಿ ಕಲಾವಿದ ಮಹಾಜನದಹಳ್ಳಿ ಕೊಟ್ರೇಶ್ ನಿರೂಪಣೆಯೊಂದಿಗೆ ಹಾಸ್ಯ ಹನಿಗಳು ಹಾಗೂ ಜನಪದ ಗೀತೆಗಳನ್ನು ಪ್ರಸ್ತುತಪಡಿಸಿ ವಿದ್ಯಾರ್ಥಿಗಳನ್ನು ರಂಜಿಸಿದರು. ಡಿ. ವೆಂಕಟೇಶ್ ಹಾಗೂ ಸಿ. ಹೊಸೂರಪ್ಪ ಅವರ ಕಲಾತಂಡದಿಂದ ಬಯಲಾಟದ ತತ್ವಪದಗಳ ಗಾಯನ ನಡೆಯಿತು. ವಿದ್ಯಾರ್ಥಿಗಳಿಂದಲೂ ಜಾನಪದ ಗೀತೆ, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಡಿ. ತಾಯಪ್ಪ, ಎಂ. ಸಂಜೀವಪ್ಪ, ರಾಮಮೂರ್ತಿ, ಅನ್ವರ್ ಬಾಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಟ್ರಸ್ಟ್ ಅಧ್ಯಕ್ಷ ಜಿ.ಕೆ. ತಿಪ್ಪೇಸ್ವಾಮಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಹಾಗೂ ಗಣ್ಯರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಹೋಟೆಲ್ ಅಳ್ಳಪ್ಪ ಅವರ ವತಿಯಿಂದ ಮಾಡಲಾಗಿತ್ತು. ರಂಗವೇದಿಕೆ, ಶಾಮಿಯಾನ, ಕುರ್ಚಿ ಹಾಗೂ ಧ್ವನಿವರ್ಧಕ ವ್ಯವಸ್ಥೆಯನ್ನು ಮಂಜು ಶಾಮಿಯಾನ ಅವರ ಸಹಕಾರದೊಂದಿಗೆ ಟ್ರಸ್ಟ್ ವತಿಯಿಂದ ಕಲ್ಪಿಸಲಾಗಿತ್ತು.
ಜಾನಪದ ಕಲೆಯ ಮೂಲಕ ವಿದ್ಯಾರ್ಥಿಗಳಲ್ಲಿ ನೆಲ, ನುಡಿ ಹಾಗೂ ಸಂಸ್ಕೃತಿಯ ಅರಿವು ಮೂಡಿಸಿದ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.






