Ballari | ಸೆ.15ರವರೆಗೆ ಜಿಲ್ಲಾದ್ಯಂತ ಜಾಬ್ ಕಾರ್ಡ್ ಮೇಳ
ಅರ್ಹ ಕುಟುಂಬಗಳು ನೋಂದಣಿ ಮಾಡಿಕೊಳ್ಳಲು ಕರೆ

ಸಂಡೂರು/ಬಳ್ಳಾರಿ: ಗ್ರಾಮೀಣ ಭಾಗದ ಜನರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ‘ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್ಗಾರ್ ಅಜೀವಿಕ ಮಿಷನ್’ ಯೋಜನೆಯಡಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 15ರವರೆಗೆ ‘ಜಾಬ್ ಕಾರ್ಡ್ ಮೇಳ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ತಿಳಿಸಿದ್ದಾರೆ.
‘ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ’ ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಈ ಅಭಿಯಾನದಲ್ಲಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಅರ್ಹ ಕುಟುಂಬಗಳ ನೋಂದಣಿ, ಹೊಸ ಜಾಬ್ ಕಾರ್ಡ್ ವಿತರಣೆ ಹಾಗೂ ಯೋಜನೆಯ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತಿದ್ದು, ದಿನಕ್ಕೆ 382 ರೂ. ಕೂಲಿ ನಿಗದಿಪಡಿಸಲಾಗಿದೆ.
ಅಭಿಯಾನದಡಿ ಕೃಷಿ ಹೊಂಡ ನಿರ್ಮಾಣ, ತೆರೆದ ಬಾವಿ, ಕೊಳವೆಬಾವಿ ಮರುಪೂರಣ ಘಟಕ, ನಾಲಾಗಳಿಗೆ ತಡೆಗೋಡೆ ಸೇರಿದಂತೆ ಜಲ ಸಂರಕ್ಷಣೆ ಮತ್ತು ಬರ ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಇದರೊಂದಿಗೆ ಅರ್ಹ ಫಲಾನುಭವಿಗಳ ಜಮೀನಿನಲ್ಲಿ ದನದ ಕೊಟ್ಟಿಗೆ, ಕುರಿ ಹಾಗೂ ಮೇಕೆ ಶೆಡ್ ನಿರ್ಮಾಣ ಸೇರಿದಂತೆ ಜೀವನೋಪಾಯಕ್ಕೆ ನೆರವಾಗುವ ವೈಯಕ್ತಿಕ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗುತ್ತದೆ.
ಗ್ರಾಮೀಣ ಭಾಗದ ಅರ್ಹ ಕುಟುಂಬಗಳು ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದುಕೊಂಡು ಉದ್ಯೋಗಕ್ಕಾಗಿ ತಮ್ಮ ಗ್ರಾಮ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಬೇಕು. ಹೊಸ ಜಾಬ್ ಕಾರ್ಡ್ ಪಡೆಯಲು ಹಾಗೂ ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮನವಿ ಮಾಡಿದ್ದಾರೆ.






