Ballari | ಜ್ಞಾನವೇ ಮನುಷ್ಯನ ನಿಜವಾದ ಸಂಪತ್ತು: ಡಾ.ಸೈಯದ್ ಜೈನುಲ್ ಆಭಿದೀನ್ ಖಾದ್ರಿ

ಬಳ್ಳಾರಿ/ಕಂಪ್ಲಿ: ಜ್ಞಾನವೇ ಮನುಷ್ಯನನ್ನು ಕಾಪಾಡುವ ನಿಜವಾದ ಸಂಪತ್ತು. ಅಕ್ಷರ ಕಲಿಯುವುದು ಹಾಗೂ ಕಲಿಸುವ ಕಾರ್ಯವನ್ನು ಇಸ್ಲಾಂ ಧರ್ಮವು ಪುಣ್ಯದಾಯಕವೆಂದು ಪರಿಗಣಿಸುತ್ತದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಡಾ. ಸೈಯದ್ ಜೈನುಲ್ ಆಭಿದೀನ್ ಖಾದ್ರಿ ಹೇಳಿದರು.
ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್, ಕಂಪ್ಲಿ ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜ್ಞಾನವನ್ನು ಸಂಪಾದಿಸುವ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳು ಹಾಗೂ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಅಂಜುಮನ್ ಖಿದ್ಮತೆ-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಕರೀಂ ಲಡ್ಡು ಮಾತನಾಡಿ, ಜ್ಞಾನವು ಬೆಳಕಿನಂತೆ. ಅದು ಅಜ್ಞಾನ ಹಾಗೂ ಅಂಧಕಾರವನ್ನು ದೂರ ಮಾಡುತ್ತದೆ. ಯುವಕರು ಹೆಚ್ಚಿನ ಜ್ಞಾನ ಸಂಪಾದಿಸಿ ಸಮಾಜದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು ಎಂದರು.
ಅತಿಥಿಗಳಾಗಿ ಅಂಜುಮನ್ ಖಿದ್ಮತೆ-ಎ-ಇಸ್ಲಾಂ ಸಂಸ್ಥೆಯ ಕಾರ್ಯದರ್ಶಿ ಜಾಹೀರ್ ಉಡೆಗಲ್ ಹಾಗೂ ಕಂಪ್ಲಿ ಹಾರ್ಡ್‌ವೇರ್ ಮಾಲೀಕ ಎಸ್.ಕೆ. ಇಂತಿಯಾಜ್ ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮೀ ಹಿಂದ್ ಕಂಪ್ಲಿ ಸ್ಥಾನೀಯ ಅಧ್ಯಕ್ಷ ವಾಸಿಮ್ ಫಯಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್‌ನ ಉದ್ದೇಶ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಶ್ವೇತಾ ಕಂಬತ್, ಉಮಾ ಕೊಲ್ಕರ್, ವರ್ಷಾ ಮಂಜುಮದಾರ್, ಜೆ. ಅಕ್ಷತಾ, ಗೌಸಿಯಾ, ಜಯಶ್ರೀ ಕೊಲ್ಕರ್, ಸುನೀತಾ ಮಠದ, ಸರಸ್ವತಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.
ಬಿ. ಜಿಲಾನ್ ಸಾಬ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






