ಬಳ್ಳಾರಿ | ನಲ್ ಜಲ್ ಕೌಶಲ್ಯ ತರಬೇತಿಗೆ ಚಾಲನೆ
ಕೌಶಲ್ಯಾಭಿವೃದ್ಧಿ ತರಬೇತಿಯಿಂದ ಮಹಿಳೆಯರ ಜೀವನಮಟ್ಟ ಸುಧಾರಣೆ: ಗಿರಿಜಾ ಶಂಕರ್

ಬಳ್ಳಾರಿ : ಪ್ರತಿಯೊರ್ವ ಮಹಿಳೆಯು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ತನ್ನ ಜೀವನದಲ್ಲಿ ಗುರಿ ತಲುಪಲು ಕೌಶಲ್ಯಾಭಿವೃದ್ಧಿ ತರಬೇತಿ ಸಹಕಾರಿ ಎಂದು ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿ ಗಿರಿಜಾ ಶಂಕರ್ ಅವರು ಹೇಳಿದರು.
ಸೋಮವಾರದಂದು ಕುರುಗೋಡಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ‘ನಲ್ ಜಲ್ ಮಿತ್ರ’ ಯೋಜನೆಯಡಿ ನೀರು ವಿತರಣಾ ನಿರ್ವಾಹಕರ ಜಾಬ್ ರೋಲ್ ಗೆ ಕುರಿತು ಮಹಿಳಾ ಸದಸ್ಯರಿಗೆ 17 ದಿನಗಳ ಕಾಲ ನೀಡಲಾಗುವ ಬಹುಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಪಂ ಯೋಜನಾ ನಿರ್ದೇಶಕ ವಿನೋದ್ ಕುಮಾರ್ ಅವರು ಮಾತನಾಡಿ, ಜಲಜೀವನ್ ಮಿಷನ್ ನೆಟ್‌ವರ್ಕ್ ವ್ಯವಸ್ಥೆ, ಪೈಪ್ ಲೈನ್ ದುರಸ್ಥಿ ಹಾಗೂ ಇತರೆ ಕಾರ್ಯಗಳ ಕುರಿತು ನಲ್-ಜಲ್ ಮಿತ್ರರಿಗೆ ತರಬೇತಿ ನೀಡಲಾಗುವುದು ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹಟ್ಟಪ್ಪ ಅಮರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಕುರುಗೋಡು ತಾಪಂ ಇಒ ನಿರ್ಮಲಾ, ಕುರುಗೋಡಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ವಿ.ತಿಮ್ಮರಾಜು ಸೇರಿದಂತೆ ಐಟಿಐ ಕಾಲೇಜಿನ ಸಿಬ್ಬಂದಿಗಳು ಮತ್ತು ಎನ್.ಆರ್.ಎಲ್.ಎಂ ಯೋಜನೆಯ ಜಿಲ್ಲಾ ಮತ್ತು ತಾಲ್ಲೂಕು ಸಿಬ್ಬಂದಿಗಳು ಭಾಗವಹಿಸಿದ್ದರು.