Ballari | ರೈತರು, ಮಹಿಳೆಯರು, ಶೋಷಿತರ ಪರವಾಗಿ ಸಾಹಿತ್ಯ ಧ್ವನಿಯಾಗಲಿ: ವೆಂಕಟಗಿರಿ ದಳವಾಯಿ

ಬಳ್ಳಾರಿ: ಸಾಹಿತ್ಯ ಮತ್ತು ಭಾಷೆ ಕೇವಲ ಅನ್ನದ ಮಾರ್ಗವಲ್ಲ. ಅವು ನಮ್ಮ ಸಂಸ್ಕೃತಿ, ಪರಿಸರ, ದುಡಿಮೆ ಮತ್ತು ಮೌಲ್ಯಗಳ ಪ್ರತೀಕಗಳಾಗಿವೆ. ರೈತರು, ಮಹಿಳೆಯರು ಹಾಗೂ ಶೋಷಿತರ ಪರವಾಗಿ ಸಾಹಿತ್ಯ ಸದಾ ಧ್ವನಿಯಾಗಬೇಕೇ ಹೊರತು ಮೌನವಾಗಬಾರದು ಎಂದು ಸಾಹಿತಿ ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.
ನಗರದ ರಾಘವ ಕಲಾ ಮಂದಿರದಲ್ಲಿ ಭಾನುವಾರ ನಡೆದ ಅಖಂಡ ಬಳ್ಳಾರಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಭುತ್ವ ಎಂದರೆ ಬಯಲು, ಅಧಿಕಾರ ಎಂದರೆ ಬಟಾಬಯಲು. ಆದರೆ, ಸಾಹಿತ್ಯ ಎನ್ನುವುದು ಬಿಲಗಳಿದ್ದಂತೆ. ಆ ಬಿಲಗಳಲ್ಲಿ ಇದ್ದುಕೊಂಡು ಎಚ್ಚರಿಸುವವರೇ ನಿಜವಾದ ಸಾಹಿತಿಗಳು. ಸಂವಿಧಾನದ ಆಶಯಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಸಾಮಾನ್ಯ ಜನರಿಗೆ ತಲುಪಿಸದಿದ್ದರೆ, ದೇಶ ಮತ್ತೊಮ್ಮೆ ಸ್ವಾತಂತ್ರ್ಯ ಕಳೆದುಕೊಳ್ಳುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷ ಸಿ.ಜಿ. ಹಂಪಣ್ಣ ಮಾತನಾಡಿ, 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಶೀಘ್ರದಲ್ಲೇ ಬಳ್ಳಾರಿಯಲ್ಲಿ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಅಧಿಕಾರಿ ಚೋರನೂರು ಕೊಟ್ರಪ್ಪ, ರಾಘವ ಕಲಾ ಮಂದಿರದ ಅಧ್ಯಕ್ಷ ಕೆ. ಕೋಟೇಶ್ವರರಾವ್, ಗಾಂಧಿಭವನದ ಕಾರ್ಯದರ್ಶಿ ಟಿ.ಜಿ. ವಿಠಲ ಹಾಗೂ ಅಖಂಡ ಬಳ್ಳಾರಿ ಜಿಲ್ಲಾ ಕಸಾಪದ ತಾಲ್ಲೂಕು ಅಧ್ಯಕ್ಷರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಆರು ನಿರ್ಣಯಗಳ ಅಂಗೀಕಾರ :
ಅಖಂಡ ಬಳ್ಳಾರಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆರು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಕರ್ನಾಟಕ ಸರ್ಕಾರ ತೀರ್ಮಾನಿಸಿದಂತೆ ಸರ್ಕಾರಿ ಶಾಲೆಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಒಪ್ಪಿಸುವ ಪ್ರಕ್ರಿಯೆಯನ್ನು ಕೈಬಿಡಬೇಕು. ದ್ವಿಭಾಷಾ ನೀತಿಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಕಡ್ಡಾಯಗೊಳಿಸಿ ಅನುಷ್ಠಾನಗೊಳಿಸಬೇಕು. ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಕರ್ನಾಟಕಕ್ಕೆ ಪ್ರತ್ಯೇಕ ಕನ್ನಡ ಧ್ವಜವನ್ನು ಅಂಗೀಕರಿಸಬೇಕು. ಈಗಾಗಲೇ ತೀರ್ಮಾನಿಸಿದಂತೆ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತಿ ಶೀಘ್ರದಲ್ಲಿ ಬಳ್ಳಾರಿಯಲ್ಲಿಯೇ ಆಯೋಜಿಸಬೇಕು. ಗಡಿಭಾಗದ ಕನ್ನಡ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಗೆ ರಾಜ್ಯ ಸರ್ಕಾರ ಮೊದಲ ಆದ್ಯತೆ ನೀಡಬೇಕು ಎಂಬ ನಿರ್ಣಯಗಳನ್ನು ಅಂಗೀಕರಿಸಲಾಯಿತು.






