ಬಳ್ಳಾರಿ ಗುಂಪು ಘರ್ಷಣೆಯ ತನಿಖೆಯನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ಜ.17ರಂದು ಬಿಜೆಪಿಯಿಂದ ಬೃಹತ್ ಸಮಾವೇಶ : ಶ್ರೀರಾಮುಲು

ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಘರ್ಷಣೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಶಾಸಕ ಭರತ್ ರೆಡ್ಡಿ ಹಾಗೂ ಅವರ ಬೆಂಬಲಿಗರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಜ.17 ರಂದು ಜಿಲ್ಲೆಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಸಮಾವೇಶವು ಕೇವಲ ಬಳ್ಳಾರಿ ಗಲಭೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ವಿರೋಧಿಸಿ ನಡೆಯುತ್ತಿರುವ ಸಮಾವೇಶವಾಗಿದೆ ಎಂದರು.
ಕಲಬುರಗಿ ಇಂದು ರಿಪಬ್ಲಿಕ್ ಆಗಿದೆ. ಅಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಪರಿಶೀಲಿಸಲು ಹೋದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಕಲ್ಲುಬಂಡೆಗಳಿಂದ ಹಲ್ಲೆಗೆ ಯತ್ನಿಸಲಾಯಿತು. ರಾಜ್ಯದಲ್ಲಿ ಗೂಂಡಾ ವರ್ತನೆ ಹೆಚ್ಚಾಗಿದ್ದು, ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜ. 17 ರಂದು ನಡೆಯಲಿರುವ ಈ ಸಮಾವೇಶದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಬಳ್ಳಾರಿ ಪಾದಯಾತ್ರೆ ಕುರಿತಾದ ಗೊಂದಲಗಳಿಗೆ ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆ ಮಾಡಬಾರದು ಎಂದೇನೂ ಇಲ್ಲ, ನಮಗೂ ಪಾದಯಾತ್ರೆ ಮಾಡುವ ಹಂಬಲವಿದೆ. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.







