Ballari | ಲಿಂಗದಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಶಾಸಕಿ ಅನ್ನಪೂರ್ಣ ಈ.ತುಕಾರಾಂ ಭೇಟಿ

ಸಂಡೂರು/ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಲಿಂಗದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕಿಯರಾದ ಅನ್ನಪೂರ್ಣ ಈ. ತುಕಾರಾಂ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ, ಬೋಧನಾ ಗುಣಮಟ್ಟ ಹಾಗೂ ಶಾಲೆಯ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.
ಶಾಲೆಗೆ ಆಗಮಿಸಿದ ಶಾಸಕಿಯವರು ನೇರವಾಗಿ ತರಗತಿ ಕೊಠಡಿಗಳಿಗೆ ತೆರಳಿ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಪರಿಶೀಲಿಸಿದರು. ಶಿಕ್ಷಕಿಯ ಪಾತ್ರವನ್ನು ತಾವೇ ನಿರ್ವಹಿಸಿದ ಅವರು, ಕೈಯಲ್ಲಿ ಸೀಮೆಸುಣ್ಣ ಹಿಡಿದು ಕಪ್ಪು ಹಲಗೆಯ ಮೇಲೆ ಅಕ್ಷರಗಳು ಮತ್ತು ಪದಗಳನ್ನು ಬರೆದು ಮಕ್ಕಳಿಗೆ ಪಾಠ ಬೋಧಿಸಿದರು. ವಿದ್ಯಾರ್ಥಿಗಳಿಂದ ಓದಿಸಿ, ಬರೆಯಿಸಿ ಅವರ ಕಲಿಕಾ ಮಟ್ಟವನ್ನು ಪರೀಕ್ಷಿಸಿದ ಅವರು, ತಪ್ಪುಗಳನ್ನು ತಿದ್ದಿಕೊಡುತ್ತಾ ಅಕ್ಷರಾಭ್ಯಾಸ ಮಾಡಿಸಿದರು.
ವಿದ್ಯಾರ್ಥಿಗಳಿಗೆ ಪ್ರತಿದಿನ ಅಭ್ಯಾಸ ಮಾಡುವುದರಿಂದ ಉತ್ತಮ ಜ್ಞಾನ ಸಂಪಾದಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು, ಓದು-ಬರಹದಲ್ಲಿ ಯಾವುದೇ ತೊಂದರೆಗಳಿದ್ದರೆ ತಮ್ಮನ್ನು ಸಂಪರ್ಕಿಸಬಹುದು ಎಂದು ಧೈರ್ಯ ತುಂಬಿದರು. ಶಿಕ್ಷಣದ ಮೂಲಕವೇ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಮಕ್ಕಳಿಗೆ ಪ್ರೇರಣೆ ನೀಡಿದರು.
ಈ ವೇಳೆ ಶಿಕ್ಷಕರೊಂದಿಗೆ ಚರ್ಚಿಸಿದ ಶಾಸಕಿಯವರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು ಎಂದು ಸೂಚಿಸಿದರು. ಬೋಧನಾ ಕಾರ್ಯದಲ್ಲಿ ಕರ್ತವ್ಯಲೋಪ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ಶಾಲೆಯ ಕುಡಿಯುವ ನೀರು, ಶೌಚಾಲಯ, ತರಗತಿ ಕೊಠಡಿಗಳು ಸೇರಿದಂತೆ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಹಾಜರಾತಿ ಹಾಗೂ ಶಾಲೆಯ ಅಗತ್ಯತೆಗಳ ಕುರಿತು ಶಿಕ್ಷಕರು ಮತ್ತು ಅಧಿಕಾರಿಗಳಿಂದ ವಿವರ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನ್ನಪೂರ್ಣ ತುಕಾರಾಂ ಅವರು, “ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಭದ್ರ ಅಡಿಪಾಯ. ಗ್ರಾಮೀಣ ಭಾಗದ ಮಕ್ಕಳಿಗೂ ನಗರ ಪ್ರದೇಶದ ವಿದ್ಯಾರ್ಥಿಗಳಷ್ಟೇ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಡಗಿರುವ ಪ್ರತಿಭೆಯನ್ನು ಹೊರತರಲು ಶಿಕ್ಷಕರು ಹಾಗೂ ಪೋಷಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು” ಎಂದು ಹೇಳಿದರು.
ಶಾಸಕಿಯವರ ಅನಿರೀಕ್ಷಿತ ಭೇಟಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿದ್ದು, ಮಕ್ಕಳ ಶಿಕ್ಷಣದ ಗುಣಮಟ್ಟದ ಬಗ್ಗೆ ಅವರು ತೋರಿದ ಕಾಳಜಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.






