Ballari | ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ 10 ಲಕ್ಷ ರೂ. ಚೆಕ್ ನೀಡಿದ ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ : ಕಳೆದ ತಿಂಗಳು ನೀಡಿದ ಭರವಸೆಯಂತೆ ಟಚ್ ಫಾರ್ ಲೈಫ್ ಫೌಂಡೇಶನ್ ವತಿಯಿಂದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ 10 ಲಕ್ಷ ರೂ.ಗಳ ಚೆಕ್ ನೀಡಲಾಗಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ಗಾಂಧಿನಗರದಲ್ಲಿರುವ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಭೇಟಿ ನೀಡಿ ಅವರು ಆಶ್ರಮದ ಅಭಿವೃದ್ಧಿಗಾಗಿ 10 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದರು.
“ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮ ದೇಶ ಹಾಗೂ ಜಗತ್ತಿನಾದ್ಯಂತ ಮಾನವೀಯ ಮೌಲ್ಯಗಳು ಮತ್ತು ನೈತಿಕ ತತ್ವಗಳನ್ನು ಸಾರುವ ಮಹತ್ವದ ಕಾರ್ಯ ಮಾಡುತ್ತಿದೆ. ಬಳ್ಳಾರಿಯಲ್ಲಿಯೂ ಈ ಸೇವೆ ನಿರಂತರವಾಗಿ ನಡೆಯುತ್ತಿದೆ. ಮುಂದೆಯೂ ಆಶ್ರಮದ ಕಾರ್ಯಗಳು ಇನ್ನಷ್ಟು ವಿಸ್ತಾರವಾಗಲಿ” ಎಂದು ಹೇಳಿದರು.
ಕಳೆದ ತಿಂಗಳು ನಡೆದ ಕಾರ್ಯಕ್ರಮದಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದ್ದೇನೆ. ಸಾಧುಗಳ ವಾಸಕ್ಕೆ ಕೊಠಡಿಗಳ ನಿರ್ಮಾಣ ಕಾರ್ಯವೂ ಶೀಘ್ರ ಆರಂಭವಾಗಲಿದೆ. ದಿನಾಂಕ ನಿಗದಿಯಾದ ಬಳಿಕ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಲಿದ್ದಾರೆ ಎಂದರು.
ಆಶ್ರಮದ ಶ್ರೀ ಮಂಗಳನಾಥ ಆನಂದಜೀ ಅವರು ಆಶ್ರಮದ ಪರವಾಗಿ ಚೆಕ್ ಸ್ವೀಕರಿಸಿ ಮಾತನಾಡಿ, “ಶಾಸಕ ನಾರಾ ಭರತ್ ರೆಡ್ಡಿ ಅವರು ಕೊಟ್ಟ ಮಾತಿನಂತೆ ನೆರವು ನೀಡಿದ್ದಾರೆ. ನಾವು ಚೆಕ್ ಪಡೆಯಲು ಬರಬಹುದೆಂದು ಹೇಳಿದರೂ, ಸ್ವತಃ ಆಶ್ರಮಕ್ಕೆ ಬಂದು ಚೆಕ್ ನೀಡಿರುವುದು ಅವರ ಸರಳತೆಯ ಸಂಕೇತ” ಎಂದು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವಾಸು ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ :
ಬಳ್ಳಾರಿಯ 3ನೇ ವಾರ್ಡಿನ ಎಪಿಎಂಸಿ ಸರ್ಕಲ್‌ನಿಂದ ಡಿವೈಎಸ್ಪಿ ಕಚೇರಿವರೆಗೆ, ಬೆಂಕಿ ಮಾರೆಮ್ಮ ದೇವಸ್ಥಾನ ಮಾರ್ಗವಾಗಿ ರಸ್ತೆ ಅಭಿವೃದ್ಧಿಗೆ ಅಂದಾಜು 4.50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ ನೀಡಿದರು.
ಹಾಗೆಯೇ 7ನೇ ವಾರ್ಡಿನ ಬಾಪೂಜಿ ನಗರದಲ್ಲಿ ಮುಖ್ಯ ಕಾಲುವೆ, ರಸ್ತೆ ಹಾಗೂ ಕಲ್ವರ್ಟ್ ನಿರ್ಮಾಣಕ್ಕೆ 1.50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಇದೇ ವೇಳೆ 8ನೇ ವಾರ್ಡಿನ ಆರ್ಡರ್ ಗೇಟ್ ಸರ್ಕಲ್‌ನಿಂದ ಗಂಗಮ್ಮ ನಾಲಾವರೆಗೆ ರಸ್ತೆ ನಿರ್ಮಾಣಕ್ಕಾಗಿ 4 ಕೋಟಿ ರೂ. ವೆಚ್ಚದ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮಗಳಲ್ಲಿ ಪಾಲಿಕೆ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.






