Ballari | ಕೈಗಾರಿಕೆಗಳಲ್ಲಿ ಬೆಂಕಿ ಅವಘಡ ತಡೆಗೆ ಅಣಕು ಪ್ರದರ್ಶನ ಅಗತ್ಯ: ಡಿಎಸ್ಪಿ ತಿಪ್ಪೇಸ್ವಾಮಿ

ಬಳ್ಳಾರಿ : ಕೈಗಾರಿಕೆಗಳು ಮತ್ತು ಕಾರ್ಖಾನೆಗಳಲ್ಲಿ ಅನಿರೀಕ್ಷಿತವಾಗಿ ಸಂಭವಿಸುವ ಬೆಂಕಿ ಅವಘಡಗಳನ್ನು ಸಮರ್ಥವಾಗಿ ಎದುರಿಸಲು, ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವನ್ನು ತಡೆಯಲು ಹಾಗೂ ತುರ್ತು ಸಂದರ್ಭಗಳಲ್ಲಿ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಸುರಕ್ಷಿತವಾಗಿ ರಕ್ಷಿಸಲು ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನಗಳು ಅತ್ಯಂತ ಅಗತ್ಯವೆಂದು ಬಳ್ಳಾರಿ ಡಿಎಆರ್ ಡಿಎಸ್ಪಿ ಜಿ.ಎಂ.ತಿಪ್ಪೇಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಗೃಹರಕ್ಷಕ ದಳ, ಪೌರರಕ್ಷಣೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಬಳ್ಳಾರಿ ತಾಲೂಕಿನ ಅಮರಾಪುರ ಗ್ರಾಮದ ಡಿ.ಎಂ. ಗ್ಲೋಬಲ್ ಕ್ಲಾತಿಂಗ್ ಕಂಪನಿಯಲ್ಲಿ ಆಯೋಜಿಸಿದ್ದ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಣಕು ಪ್ರದರ್ಶನದ ಮುಖ್ಯ ಉದ್ದೇಶ ಕಡಿಮೆ ಸಮಯದಲ್ಲಿ ಕನಿಷ್ಠ ನಷ್ಟದೊಂದಿಗೆ ಜನರನ್ನು ರಕ್ಷಿಸುವುದಾಗಿದೆ. ತುರ್ತು ಸಂದರ್ಭಗಳಲ್ಲಿ ತ್ವರಿತ ಕಾರ್ಯಾಚರಣೆ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಅತ್ಯಗತ್ಯ ಎಂದು ಅವರು ತಿಳಿಸಿದರು.
ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಕಾರ್ಖಾನೆಯ ಭದ್ರತಾ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ. ಅಲಾರಂ ಮೊಳಗಿದ ತಕ್ಷಣ ಸಿಬ್ಬಂದಿ ಹೇಗೆ ರ‍್ಯಾಲಿ ಪೋಸ್ಟ್‌ಗೆ ಸೇರಬೇಕು, ಕಾರ್ಖಾನೆಯ ವಿವಿಧ ದ್ವಾರಗಳು ಮತ್ತು ಪ್ರದೇಶಗಳಲ್ಲಿ ಯಾರು ಕರ್ತವ್ಯ ನಿರ್ವಹಿಸಬೇಕು ಎಂಬುದರ ಕುರಿತು ಪೂರ್ವಸಿದ್ಧತಾ ಚಾರ್ಟ್ ಸಿದ್ಧವಾಗಿರಬೇಕು ಎಂದು ಸಲಹೆ ನೀಡಿದರು.
ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ವೈ.ಶೇಕ್ ಸಾಬ್ ಮಾತನಾಡಿ, ಉಕ್ರೇನ್, ಇರಾನ್ ಹಾಗೂ ಇಸ್ರೇಲ್ ದೇಶಗಳ ಇತ್ತೀಚಿನ ಪರಿಸ್ಥಿತಿಗಳನ್ನು ಗಮನಿಸಿದರೆ ಅಗ್ನಿ ಸುರಕ್ಷತೆ ಮತ್ತು ವಿಪತ್ತು ನಿರ್ವಹಣಾ ಮೋಕ್ ಡ್ರಿಲ್‌ಗಳ ಮಹತ್ವ ಸ್ಪಷ್ಟವಾಗುತ್ತದೆ ಎಂದರು.
ಭೂಕಂಪ, ನೆರೆಹಾವಳಿ ಸೇರಿದಂತೆ ನೈಸರ್ಗಿಕ ವಿಕೋಪಗಳು ಹಾಗೂ ಯುದ್ಧದಂತಹ ಮಾನವ ನಿರ್ಮಿತ ಆಪತ್ತುಗಳ ಸಂದರ್ಭಗಳಲ್ಲಿ ಇಂತಹ ತಾಲೀಮುಗಳು ಜೀವ ರಕ್ಷಣೆಗೆ ಸಹಕಾರಿಯಾಗುತ್ತವೆ ಎಂದು ಹೇಳಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪರಿಣಿತ ಪರಮೇಶ ಮಾತನಾಡಿ, ನಾಗರಿಕರ ಸುರಕ್ಷತೆ ಮತ್ತು ಸನ್ನದ್ಧತೆಯನ್ನು ಪರೀಕ್ಷಿಸಲು ವರ್ಷಕ್ಕೆ ಎರಡು ಬಾರಿ ಏರ್ ರೈಡ್ ಅಟ್ಯಾಕ್ ಹಾಗೂ ಬ್ಲ್ಯಾಕ್ ಔಟ್ ಮೋಕ್ ಡ್ರಿಲ್‌ಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಣಕು ಪ್ರದರ್ಶನದಲ್ಲಿ ಗಾಯಾಳುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು, ಪ್ರಥಮ ಚಿಕಿತ್ಸೆ ನೀಡುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ತುರ್ತು ಆರೋಗ್ಯ ಕ್ರಮಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಜಂಟಿಯಾಗಿ ವಿವಿಧ ರಕ್ಷಣಾ ಕಾರ್ಯಾಚರಣೆಗಳ ಪ್ರದರ್ಶನ ನೀಡಿದರು. ಸಾರ್ವಜನಿಕರು ಆಸಕ್ತಿಯಿಂದ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ವಿನಾಯಕಗೌಡ, ಗೃಹರಕ್ಷಕ ದಳದ ಅಧಿಕಾರಿ ಎಚ್.ತಿಪ್ಪೇಸ್ವಾಮಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಮಹಾಂತೇಶ್ ಕಂಚಿನಮಠ, ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.






