Ballari | ತುಂಗಭದ್ರೆಯಲ್ಲಿ ನೀರಿಲ್ಲ, ಹೊಲಗಳಲ್ಲಿ ಹಸಿರಿಲ್ಲ; ಒಣಗಿದ ಭತ್ತದ ಬೆಳೆ, ಕಂಗಾಲಾದ ರೈತರು

ಬಳ್ಳಾರಿ/ಕಂಪ್ಲಿ: ಈ ಬಾರಿಯ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಕಂಪ್ಲಿ ತಾಲೂಕಿನಲ್ಲಿ ಪಂಪ್‌ಸೆಟ್‌ಗಳನ್ನು ಅವಲಂಬಿಸಿ ಬೆಳೆದಿರುವ ಸಾವಿರಾರು ಎಕರೆ ಭತ್ತದ ಬೆಳೆ ನೀರಿನ ಅಭಾವದಿಂದ ಒಣಗಲಾರಂಭಿಸಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಂಪ್ಲಿ, ಎಮ್ಮಿಗನೂರು, ಮಣ್ಣೂರು, ಸೂಗೂರು, ರಾಮಚಂದ್ರಪುರ ಕ್ಯಾಂಪ್, ಸಣಾಪುರ, ಇಟಗಿ ಹಾಗೂ ನಂ.2 ಮುದ್ದಾಪುರ ಸೇರಿದಂತೆ ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಆದರೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಕುಸಿದ ಪರಿಣಾಮ ನದಿಯಲ್ಲೂ ನೀರಿನ ಹರಿವು ಬಹುತೇಕ ಸ್ಥಗಿತಗೊಂಡಿದ್ದು, ಪಂಪ್‌ಸೆಟ್‌ಗಳ ಮೂಲಕ ನೀರು ಹರಿಸಲು ಸಾಧ್ಯವಾಗದೆ ಬೆಳೆಗಳು ಒಣಗುತ್ತಿವೆ.
ಸುಮಾರು ಒಂದೂವರೆ ತಿಂಗಳ ಹಿಂದೆ ನದಿಯಲ್ಲಿ ನೀರಿದ್ದಾಗ ರೈತರು ಬೋರ್‌ವೆಲ್ ಹಾಗೂ ಪಂಪ್‌ಸೆಟ್ ನೆರವಿನಿಂದ ಸಸಿ ಮಡಿ ಹಾಕಿ ನಾಟಿ ಮಾಡಿದ್ದರು. ಗೊಬ್ಬರ, ಕೂಲಿ ಸೇರಿದಂತೆ ಪ್ರತಿ ಎಕರೆಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿರುವ ರೈತರು ಈಗ ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈಗಾಗಲೇ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಡೀಸೆಲ್, ರಸಗೊಬ್ಬರ ಸೇರಿದಂತೆ ಕೃಷಿ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದು, ಬೆಳೆಗಳಿಗೆ ಸಮರ್ಪಕ ಬೆಂಬಲ ಬೆಲೆಯೂ ಇಲ್ಲದಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಕಳೆದ ವರ್ಷ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಸಮಸ್ಯೆಯಿಂದ ಬೇಸಿಗೆ ಬೆಳೆ ಕೈತಪ್ಪಿತ್ತು. ಈ ಬಾರಿ ಹೊಸ ಗೇಟ್ ಅಳವಡಿಕೆಯ ಬಳಿಕ ಉತ್ತಮ ಬೆಳೆ ನಿರೀಕ್ಷಿಸಿದ್ದ ರೈತರಿಗೆ ಮಳೆ ಕೊರತೆ ಮತ್ತು ನದಿಯಲ್ಲಿ ನೀರಿನ ಅಭಾವ ದೊಡ್ಡ ಹೊಡೆತ ನೀಡಿದೆ. ನದಿಯನ್ನೇ ಅವಲಂಬಿಸಿ ಬೆಳೆ ಬೆಳೆದಿರುವ ರೈತರು ಈಗ ಭತ್ತದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಜಲಾಶಯದಲ್ಲಿ ನೀರಿನ ಕೊರತೆಯಿಂದ ನದಿಯ ಹರಿವು ಸ್ಥಗಿತಗೊಂಡಿದ್ದು, ಅಂತರ್ಜಲ ಮಟ್ಟವೂ ಕುಸಿದಿದೆ. ಇದರಿಂದ ಕೃಷಿಯಷ್ಟೇ ಅಲ್ಲ, ರೈತರ ಜೀವನೋಪಾಯವೂ ಅತಂತ್ರವಾಗಿದೆ. ಕೂಡಲೇ ತುಂಗಭದ್ರಾ ನದಿಗೆ ನೀರು ಹರಿಸಿ ಭತ್ತದ ಬೆಳೆಗಳನ್ನು ಉಳಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.






