Ballari | ನರ್ಸರಿ ಮಾಲಕನ ಕೊಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಬಳ್ಳಾರಿ/ಕುರುಗೋಡು: ಸೆ.6ರಂದು ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಯಲ್ಲಾಪುರ ಕ್ರಾಸ್ ಬಳಿ ನಡೆದಿದ್ದ ನರ್ಸರಿ ಮಾಲೀಕ ಎನ್. ಉಮಾಶಂಕರ್ (38) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.
ಕುರುಗೋಡಿನ ಯಲ್ಲಾಪುರ ಕ್ರಾಸ್ ನಿವಾಸಿಗಳಾದ ಅಂಡಿ ಜೋಗಿ ಹನುಮಂತಪ್ಪ (30) ಹಾಗೂ ಬಣಗಾರ ಮಂಜುನಾಥ (26) ಬಂಧಿತ ಆರೋಪಿಗಳಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪೋಲೇಪಲ್ಲಿ ಅರುಣ್ ಕುಮಾರ್ (25) ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಬಂಧಿತರಿಂದ ಕೊಲೆಗೆ ಬಳಸಿದ ಒಂದು ಮಾರಕಾಸ್ತ್ರ, ನಾಲ್ಕು ಮೋಟಾರ್ ಸೈಕಲ್‌ಗಳು, ಒಂದು ಕಾರು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾಹಿತಿ ಪ್ರಕಾರ, ಉಮಾಶಂಕರ್ ಮತ್ತು ಅರುಣ್ ಕುಮಾರ್ ನಡುವೆ ಕೋಕೋಪಿಟ್ (ನರ್ಸರಿ ಗೊಬ್ಬರ) ವ್ಯವಹಾರ ನಡೆದಿತ್ತು. ಉಮಾಶಂಕರ್ ಅವರಿಂದ 60 ಸಾವಿರ ರೂ. ಮೌಲ್ಯದ ಗೊಬ್ಬರ ಖರೀದಿಸಿದ್ದ ಅರುಣ್ ಕುಮಾರ್ 50 ಸಾವಿರ ರೂ. ಪಾವತಿಸಿ, ಉಳಿದ 10 ಸಾವಿರ ರೂ. ಬಾಕಿ ಉಳಿಸಿಕೊಂಡಿದ್ದ.
ಬಾಕಿ ಹಣವನ್ನು ಉಮಾಶಂಕರ್ ಪದೇಪದೆ ಕೇಳುತ್ತಿದ್ದುದರಿಂದ ದ್ವೇಷ ಬೆಳೆಸಿಕೊಂಡ ಅರುಣ್ ಕುಮಾರ್, ಸಹಚರರೊಂದಿಗೆ ಸಂಚು ರೂಪಿಸಿ ಉಮಾಶಂಕರ್ ಅವರನ್ನು ಯಲ್ಲಾಪುರ ಕ್ರಾಸ್ ಬಳಿ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.






