Ballari | ವಿಶ್ವ ಆದಿವಾಸಿ ದಿನಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಶಿಕಾರಿ ರಾಮು ಕರೆ

ಬಳ್ಳಾರಿ/ಕಂಪ್ಲಿ: ಆ. 9ರಂದು ಹುಬ್ಬಳ್ಳಿ–ಧಾರವಾಡದ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ 32ನೇ ವಿಶ್ವ ಆದಿವಾಸಿ ದಿನಾಚರಣೆಯಲ್ಲಿ ಆದಿವಾಸಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಚ್.ಪಿ. ಶಿಕಾರಿ ರಾಮು ಕರೆ ನೀಡಿದರು.
ಪಟ್ಟಣದ ಶಿಕಾರಿ ಕಾಲೋನಿಯ ತುಳಜಾ ಭವಾನಿ ದೇವಸ್ಥಾನದಲ್ಲಿ ಗುರುವಾರ ನಡೆದ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವಸಂಸ್ಥೆಯ ಪ್ರೇರಣೆಯಿಂದ 1995ರಿಂದ ವಿಶ್ವ ಆದಿವಾಸಿ ದಿನಾಚರಣೆ ಆಚರಿಸಲಾಗುತ್ತಿದ್ದು, ಕಳೆದ 15 ವರ್ಷಗಳಿಂದ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯದ ವಿವಿಧೆಡೆ ಅರ್ಥಪೂರ್ಣವಾಗಿ ದಿನಾಚರಣೆ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಮಾರು 50 ಬುಡಕಟ್ಟು ಸಮುದಾಯಗಳಿದ್ದು, 2011ರ ಜನಗಣತಿ ಪ್ರಕಾರ ಅವರ ಜನಸಂಖ್ಯೆ 42,48,987ರಷ್ಟಿದೆ. ಡುಂಗ್ರಿ ಗರಾಸಿಯ, ಹಕ್ಕಿಪಿಕ್ಕಿ, ಕಾತಕರಿ, ಪಾರ್ಧಿ, ಅಡ್ಡಿಚಿಂಚೇರ್, ಹರಣ ಶಿಕಾರಿ, ರಾಜಗೊಂಡ ಸೇರಿದಂತೆ ಹಲವು ಬುಡಕಟ್ಟು ಸಮುದಾಯಗಳು ಇಂದಿಗೂ ಬದುಕಿಗಾಗಿ ಅಲೆಮಾರಿ ಜೀವನ ನಡೆಸುತ್ತಿರುವುದು ವಿಷಾದನೀಯವಾಗಿದೆ ಎಂದು ಹೇಳಿದರು.
ಬುಡಕಟ್ಟು ಸಮುದಾಯಗಳ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆ, ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯೋಗ, ಮಹಿಳಾ ಮತ್ತು ಯುವ ಸಬಲೀಕರಣ, ಆರೋಗ್ಯ ಜಾಗೃತಿ ಹಾಗೂ ಸರ್ಕಾರಿ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಈ ಬಾರಿಯ ವಿಶ್ವ ಆದಿವಾಸಿ ದಿನಾಚರಣೆಯಲ್ಲಿ ಸಚಿವರು, ಶಾಸಕರು, ಚಿಂತಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬುಡಕಟ್ಟು ಸಮುದಾಯದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಬಳ್ಳಾರಿ ಜಿಲ್ಲಾ ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘದ ಅಧ್ಯಕ್ಷ ಹೆಚ್.ಪಿ. ಶ್ರೀಕಾಂತ, ಉಪಾಧ್ಯಕ್ಷ ಶಿಕಾರಿ ಬಾಬು, ಜಿಲ್ಲಾ ಹಕ್ಕಿಪಿಕ್ಕಿ–ಪಾರ್ಧಿ–ಹರಣ ಶಿಕಾರಿ ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಜಾನಕಿ, ಕಂಪ್ಲಿ ಹಕ್ಕಿಪಿಕ್ಕಿ ಯುವಕರ ಸಂಘದ ಅಧ್ಯಕ್ಷ ಹರಿ ಕೃಷ್ಣ, ಮುಖಂಡರಾದ ಗೋಪಿ, ಈರಣ್ಣ, ಹೆಚ್.ಪಿ. ಸೋಮ, ಗೋವಿಂದಪ್ಪ, ಅಂಜಿನಿ, ಗನ್ನುಸಿಂಗ್, ಗಂಗಪ್ಪ, ರಾಮು ಬಳ್ಳಾರಿ, ಈರಮ್ಮ ಬಳ್ಳಾರಿ, ಶಾರದಮ್ಮ, ರೇಣುಕಮ್ಮ, ಅಮೀನ್ ಕಟ್ಟಿಮನಿ, ಮೀನಾಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






