Ballari | ‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ: ತಹಶೀಲ್ದಾರ್ ಅನಿಲ್ ಕುಮಾರ್

ಸಂಡೂರು/ಬಳ್ಳಾರಿ: ಸಂಡೂರು ಪಟ್ಟಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.
ತಾಲೂಕು ಆಡಳಿತದ ವತಿಯಿಂದ ಛತ್ರಪತಿ ವಿದ್ಯಾಮಂದಿರದ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಶಾಸಕಿ ಅನ್ನಪೂರ್ಣ ಈ. ತುಕಾರಾಮ್ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. ಬಳಿಕ ರಾಷ್ಟ್ರಗೀತೆ ಮೊಳಗಿತು.
ಇದಕ್ಕೂ ಮುನ್ನ ಬೆಳಿಗ್ಗೆ 8 ಗಂಟೆಗೆ ತಾಲೂಕು ಕಚೇರಿ ಆವರಣದಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್ ಹಾಗೂ ಸಿಬ್ಬಂದಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿದರು.
ತಹಶೀಲ್ದಾರ್ ಅನಿಲ್ ಕುಮಾರ್ ಮಾತನಾಡಿ, ಸ್ವಾತಂತ್ರ್ಯೋತ್ಸವವು ಕೇವಲ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗಬಾರದು. ದೇಶದ ಸಾಧನೆಗಳನ್ನು ಸ್ಮರಿಸುವುದರ ಜೊತೆಗೆ ಕೊರತೆಗಳನ್ನು ಅರಿತು ಉತ್ತಮ ಭವಿಷ್ಯ ನಿರ್ಮಿಸುವ ಸಂಕಲ್ಪದ ದಿನವಾಗಬೇಕು. ‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದರು.
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ 1947ರವರೆಗೆ ನಡೆದ ಸುದೀರ್ಘ ಹೋರಾಟವನ್ನು ಸ್ಮರಿಸಿದ ಅವರು, ಮಂಗಲ್ ಪಾಂಡೆ, ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪೆ, ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್, ಬಿಪಿನ್ ಚಂದ್ರ ಪಾಲ್, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್, ಜವಾಹರಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅನೇಕ ಮಹನೀಯರ ತ್ಯಾಗ-ಬಲಿದಾನವನ್ನು ಸ್ಮರಿಸಿದರು.
ಶಾಸಕಿ ಅನ್ನಪೂರ್ಣ ಈ. ತುಕಾರಾಮ್ ಮಾತನಾಡಿ, ಸಂಡೂರು ಕೇವಲ ಒಂದು ತಾಲೂಕು ಅಲ್ಲ. ಸಹಬಾಳ್ವೆ, ಸಾಮಾಜಿಕ ಸಾಮರಸ್ಯ, ಪ್ರಕೃತಿ ಹಾಗೂ ಖನಿಜ ಸಂಪತ್ತು, ಕಾರ್ಮಿಕರ ಶ್ರಮ, ರೈತರ ಪರಿಶ್ರಮ ಮತ್ತು ಮಾನವೀಯತೆಯ ನೆಲೆಯಾಗಿದೆ ಎಂದರು.
ಮಹಾತ್ಮ ಗಾಂಧೀಜಿ ಸಂಡೂರಿಗೆ ಭೇಟಿ ನೀಡಿದ್ದ ಐತಿಹಾಸಿಕ ನೆನಪನ್ನು ಉಲ್ಲೇಖಿಸಿದ ಅವರು, ಸತ್ಯ, ಅಹಿಂಸೆ, ಸ್ವಚ್ಛತೆ, ಸ್ವಗ್ರಾಮ ಹಾಗೂ ಸರ್ವೋದಯದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಗಾಂಧೀಜಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಸಂಡೂರು ಎಲ್ಲ ಜಾತಿ, ಧರ್ಮ ಹಾಗೂ ಸಮುದಾಯದ ಜನರು ಒಗ್ಗಟ್ಟಿನಿಂದ ಬದುಕುವ ‘ಸರ್ವಜನರ ಶಾಂತಿಯ ತೋಟ’ವಾಗಬೇಕು. ಸ್ವಾತಂತ್ರ್ಯದ ನಿಜವಾದ ಅರ್ಥ ಪ್ರತಿಯೊಬ್ಬರಿಗೂ ಗೌರವಯುತ ಬದುಕು ದೊರೆಯುವುದಾಗಿದೆ ಎಂದು ಹೇಳಿದರು.
ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, “2047ರಲ್ಲಿ ಭಾರತಕ್ಕೆ 100 ವರ್ಷ ತುಂಬುವಾಗ ದೇಶವನ್ನು ಮುನ್ನಡೆಸುವವರು ನೀವೇ. ಆದ್ದರಿಂದ ಯಾವುದೇ ಕಾರಣಕ್ಕೂ ಶಾಲೆ ಬಿಡಬೇಡಿ” ಎಂದು ಕಿವಿಮಾತು ಹೇಳಿದರು.
“ಗಣಿ ಕೆಲಸ, ಕೂಲಿ ಕೆಲಸ ಅಥವಾ ವಲಸೆ ಜೀವನದ ಕಡೆಗೆ ಹೋಗಬೇಡಿ. ತಂದೆ-ತಾಯಿ ಕಷ್ಟಪಟ್ಟು ನಿಮ್ಮನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಪುಸ್ತಕ ಹಿಡಿದು ಜ್ಞಾನ ಸಂಪಾದಿಸಿ ಕುಟುಂಬವನ್ನು ಮೇಲಕ್ಕೆತ್ತಬೇಕು. ತಾಲೂಕಿನ ಮೊದಲ ತಲೆಮಾರಿನ ಪದವೀಧರರೇ ನಮ್ಮ ನಿಜವಾದ ಹೀರೋಗಳು” ಎಂದು ಮಕ್ಕಳಿಗೆ ಪ್ರೇರಣೆ ನೀಡಿದರು.
ವಿದ್ಯಾರ್ಥಿಗಳ ಕನಸುಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ‘ನಿಮ್ಮ ಕನಸಿನ ಸಂಡೂರು ಹೇಗಿರಬೇಕು?’ ಎಂಬ ವಿಷಯದ ಕುರಿತು ತಾಲೂಕಿನ ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲು ಸೂಚಿಸಿರುವುದಾಗಿ ತಿಳಿಸಿದರು. ವಿದ್ಯಾರ್ಥಿಗಳ ಅಭಿಪ್ರಾಯ ಹಾಗೂ ಕನಸುಗಳನ್ನು ಪರಿಗಣಿಸಿ ಭವಿಷ್ಯದ ಸಂಡೂರು ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಪಥಸಂಚಲನಕ್ಕೆ ಮೆರುಗು :
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಶಾಸಕಿ ಸೇರಿದಂತೆ ಗಣ್ಯರು ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು.
ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನೂರುದ್ದೀನ್ ಎಸ್., ಇಒ ಮಡಗಿನ ಬಸಪ್ಪ, ಆರಕ್ಷಕ ವೃತ್ತ ನಿರೀಕ್ಷಕ ಮಹೇಶ್ ಗೌಡ, ಬಿಇಒ ಡಾ. ಐ.ಆರ್. ಅಕ್ಕಿ, ಪುರಸಭೆ ಮುಖ್ಯಾಧಿಕಾರಿ ವಿನಯ್ ಕುಮಾರ್, ಸಿಡಿಪಿಒ ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ್, ಪಶುಸಂಗೋಪನೆ ಇಲಾಖೆಯ ಡಾ. ವಲಿಬಾಷ, ಅಕ್ಷಯ್ ಲಾಡ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಂಘಟನೆಗಳ ಪದಾಧಿಕಾರಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






