Ballari | ಅಕ್ರಮ ಜೂಜಾಟದ ಮೇಲೆ ಪೊಲೀಸ್ ದಾಳಿ: 5.71 ಲಕ್ಷ ರೂ. ನಗದು ಜಪ್ತಿ

ಬಳ್ಳಾರಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ನಡೆಯುತ್ತಿದ್ದ ಅಕ್ರಮ ಜೂಜಾಟದ ಮೇಲೆ ಪೊಲೀಸರು ದಾಳಿ ನಡೆಸಿ, ಒಟ್ಟು 5,71,725 ರೂ. ನಗದನ್ನು ಜಪ್ತಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ತಿಳಿಸಿದ್ದಾರೆ.
ಜಿಲ್ಲಾದ್ಯಂತ ಒಟ್ಟು 29 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ, 192 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮತ್ತೊಂದೆಡೆ, ಬಳ್ಳಾರಿಯಿಂದ ಕುಡುತಿನಿ ಮಾರ್ಗವಾಗಿ ಹೊಸಪೇಟೆಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ತಡೆದು ಪರಿಶೀಲಿಸಿದಾಗ 2,73,792 ರೂ. ಮೌಲ್ಯದ 119.4 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದೆ.
ಈ ಸಂಬಂಧ ಮಹಾರಾಷ್ಟ್ರ ಮೂಲದ ರವಿರಾಜ್ ಗೌತಮ್ ಜಾಧವ್, ಸೂರಜ್ ಇಂಗ್ಳೆ ಹಾಗೂ ಬಳ್ಳಾರಿಯ ಅಭಿಲಾಷ್, ಧನುಂಜಯ ಮತ್ತು ಲಾರಿ ಮಾಲೀಕ ಅಶುತೋಷ್ ಪ್ರಕಾಶ್ ದೇವರಮನೆ ಸೇರಿದಂತೆ ಐವರ ವಿರುದ್ಧ ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಪ್ರಸಾದ್ ಗೋಖಲೆ, ಸಿಪಿಐ ಬಾಳನಗೌಡ, ಪಿಎಸ್ಐಗಳಾದ ಮುದ್ದುರಂಗಸ್ವಾಮಿ, ವಾಣಿ, ಎಎಸ್ಐ ಕುಬೇರ್ ನಾಯ್ಕ ಹಾಗೂ ಆಹಾರ ಇಲಾಖೆಯ ಶಿರಸ್ತೇದಾರ್ ಶರಣಬಸಯ್ಯ ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






